
ಹೊಸನಗರ: ಸಹೋದ್ಯೋಗಿಯ ಕುಟುಂಬದ ವಿಚಾರವಾಗಿ ನೀಡಿದ ಬುದ್ಧಿವಾದವೇ ಕೊನೆಗೆ ಜೀವ ಕಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸೊನಲೆ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಕ್ಷುಲ್ಲಕ ಮಾತಿನ ಚಕಮಕಿಯು ವಿಕೋಪಕ್ಕೆ ತಿರುಗಿ, ಟಿಂಬರ್ ಕಟಿಂಗ್ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಚಾಕು ಇರಿತಕ್ಕೆ ಬಲಿಯಾಗಿದ್ದಾನೆ.
ಮೃತರನ್ನು ಪರಶುರಾಮ ರಾಮಪ್ಪ ಲಮಾಣಿ (ಇಚನಹಳ್ಳಿ ತಾಂಡ, ದೇವಿಕೊಪ್ಪ ಅಂಚೆ, ಕಲಘಟಗಿ ತಾಲೂಕು, ಧಾರವಾಡ ಜಿಲ್ಲೆ) ಎಂದು ಗುರುತಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಶುರಾಮ ಶೆಟ್ಟಪ್ಪ ತಂಬೂರಿ ಹಾಗೂ ಅರುಣ ಪುನ್ನಪ್ಪ ಲಮಾಣಿ ವಿರುದ್ಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
ಮೂರು ತಿಂಗಳಿಂದ ಹೊಸನಗರದಲ್ಲಿ ಕೆಲಸ
ಧಾರವಾಡ ಜಿಲ್ಲೆಯ ಇಚನಹಳ್ಳಿ ತಾಂಡದ ಆರು ಮಂದಿ ಕಾರ್ಮಿಕರು ಕಳೆದ ಮೂರು ತಿಂಗಳಿನಿಂದ ಹೊಸನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಟಿಂಬರ್ ಕಟಿಂಗ್ ಕೆಲಸ ಮಾಡುತ್ತಿದ್ದರು. ಸೊನಲೆ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಇವರು ಪ್ರತಿದಿನ ಕೆಲಸ ಮುಗಿಸಿ ಸಂಜೆ ಒಂದೇ ಮನೆಯಲ್ಲಿ ಸೇರಿಕೊಳ್ಳುತ್ತಿದ್ದರು.
ಮದ್ಯಪಾನದ ವೇಳೆ ಆರಂಭವಾದ ಜಗಳ
ಶನಿವಾರ ಸಂಜೆ ಕೆಲಸ ಮುಗಿಸಿ ಬಂದ ಬಳಿಕ ಕೆಲವರು ಹೊಸನಗರ ಸಂತೆಯಿಂದ ತರಕಾರಿ ಹಾಗೂ ಮದ್ಯ ತಂದು ಚಿಕನ್ ಅಡುಗೆ ಮಾಡಿದ್ದರು. ಈ ವೇಳೆ ಮದ್ಯಪಾನದ ಸಂದರ್ಭದಲ್ಲಿ ಅರುಣನ ಕುಟುಂಬದ ವಿಚಾರವಾಗಿ ಮೃತ ಪರಶುರಾಮ ಲಮಾಣಿ ಬುದ್ಧಿವಾದ ಹೇಳಿದ್ದರಿಂದ ಇಬ್ಬರ ನಡುವೆ ವಾಗ್ವಾದ ಉಂಟಾಗಿದೆ.ಮೊದಲು ಅಲ್ಲಿದ್ದ ಇತರ ಕಾರ್ಮಿಕರು ಮಧ್ಯಪ್ರವೇಶಿಸಿ ಜಗಳವನ್ನು ಶಮನಗೊಳಿಸಿದ್ದರು. ಆದರೆ ಸ್ವಲ್ಪ ಸಮಯದ ಬಳಿಕ ಪರಿಸ್ಥಿತಿ ಮತ್ತೆ ಉದ್ವಿಗ್ನಗೊಂಡಿದೆ.
ಅಡುಗೆ ಮನೆಯ ಚಾಕುವಿನಿಂದ ದಾಳಿ
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಅರುಣ ಪುನ್ನಪ್ಪ ಲಮಾಣಿ ಮತ್ತೊಮ್ಮೆ ಪರಶುರಾಮ ಲಮಾಣಿ ಅವರೊಂದಿಗೆ ಜಗಳವಾಡಿ ಅವರ ಕಾಲುಗಳನ್ನು ಹಿಡಿದಿದ್ದಾನೆ. ಇದೇ ವೇಳೆ ಪರಶುರಾಮ ಶೆಟ್ಟಪ್ಪ ತಂಬೂರಿ ಅಡುಗೆ ಮನೆಯಿಂದ ತರಕಾರಿ ಕತ್ತರಿಸುವ ಚಾಕು ತಂದು ಪರಶುರಾಮ ಲಮಾಣಿ ಅವರ ಕುತ್ತಿಗೆಯ ಬಲಭಾಗಕ್ಕೆ ಇರಿದಿದ್ದಾನೆ ಎನ್ನಲಾಗಿದೆ.ಚಾಕು ಇರಿತದಿಂದ ತೀವ್ರ ರಕ್ತಸ್ರಾವಗೊಂಡ ಪರಶುರಾಮ ಲಮಾಣಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ 112 ತುರ್ತು ಸೇವೆಗೆ ಕರೆ ಮಾಡಿ ಸಹಾಯ ಕೋರಲಾಗಿತ್ತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಕೊಲೆ ಪ್ರಕರಣ ದಾಖಲು
ಮೃತರ ಸಹೋದ್ಯೋಗಿ ಲಕ್ಷ್ಮಣ ಗೋವಿಂದ ರಾಠೋಡ ನೀಡಿದ ದೂರಿನ ಮೇರೆಗೆ ಹೊಸನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಎಸ್ಪಿ ಭೇಟಿ – ತನಿಖೆ ಚುರುಕು
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಅವರು ಶನಿವಾರ ತಡರಾತ್ರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಹೊಸನಗರ ಪೊಲೀಸ್ ಠಾಣೆಯ ಪಿಎಸ್‌ಐ ಶಂಕರಗೌಡ ಪಾಟೀಲ್ ಅವರ ನೇತೃತ್ವದಲ್ಲಿ ಪ್ರಕರಣದ ತನಿಖೆ ಮುಂದುವರಿದಿದ್ದು, ಘಟನೆಯ ನಿಖರ ಕಾರಣ ಹಾಗೂ ಇತರೆ ವಿವರಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
