ಶಿವಮೊಗ್ಗ: ಹೊಸನಗರ ಹಾಗೂ ರಿಪ್ಪನ್‌ಪೇಟೆ ಪೊಲೀಸ್ ಠಾಣೆಗಳ ಅಧಿಕಾರಿಗಳು ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳ ತನಿಖೆಯಲ್ಲಿ ತೋರಿಸುತ್ತಿರುವ ದಕ್ಷತೆ ಮತ್ತು ತ್ವರಿತ ಕಾರ್ಯಾಚರಣೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಒಂದರ ಹಿಂದೆ ಒಂದರಂತೆ ನಡೆದ ಹಲವು ಪ್ರಕರಣಗಳನ್ನು ಸಮರ್ಥವಾಗಿ ಭೇದಿಸಿ ಆರೋಪಿಗಳನ್ನು ಬಂಧಿಸುವ ಮೂಲಕ ಜಿಲ್ಲೆಯ ಪೊಲೀಸ್ ಇಲಾಖೆ ಜನರಲ್ಲಿ ವಿಶ್ವಾಸ ಮೂಡಿಸಿದೆ.

ರಾಷ್ಟ್ರೀಯ ಅಹಿಂದ ಸಂಘಟನೆಯ ರಾಜ್ಯ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಜಿಲ್ಲಾ ರೈತ ಘಟಕದ ಜಿಲ್ಲಾಧ್ಯಕ್ಷರು ಹಾಗೂ ಸರ್ವಧರ್ಮ ಸೌಹಾರ್ದ ಟ್ರಸ್ಟ್ ಅಧ್ಯಕ್ಷರಾದ ಜಯರಾಮ್ ಶೆಟ್ಟಿ ಅವರು ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿ ಮಾತನಾಡಿದ್ದಾರೆ.

ಹೊಸನಗರ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಶಂಕರಗೌಡ ಪಾಟೀಲ್, ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ರಾಜು ರೆಡ್ಡಿ, ಸರ್ಕಲ್ ಇನ್‌ಸ್ಪೆಕ್ಟರ್ ಗೌಡಪ್ಪಗೌಡ ಅವರ ನೇತೃತ್ವದಲ್ಲಿ ಪೊಲೀಸರು ಅತ್ಯಂತ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ದಕ್ಷತೆ ಶಿವಮೊಗ್ಗ ಜಿಲ್ಲೆಯ ಮೂಲೆಮೂಲೆಗಳಲ್ಲೂ ಚರ್ಚೆಗೆ ಗ್ರಾಸವಾಗಿದೆ ಎಂದು ಅವರು ಹೇಳಿದರು.

ಇತ್ತೀಚೆಗೆ ನಡೆದ ಪಟಗುಪ್ಪ ಸೇತುವೆ ಸಮೀಪದ ಜಾನುವಾರು ಹತ್ಯೆ ಪ್ರಕರಣ, ನೀರು ಕೇಳುವ ನೆಪದಲ್ಲಿ ನಡೆದ ಸರಗಳ್ಳತನ ಪ್ರಕರಣ, ಬಸ್ ನಿಲ್ದಾಣದಲ್ಲಿ ಬಿಟ್ಟುಹೋಗಿದ್ದ ಹೆಣ್ಣು ಮಗುವಿನ ಪೋಷಕರನ್ನು ಪತ್ತೆ ಹಚ್ಚಿದ ಕಾರ್ಯಾಚರಣೆ ಹಾಗೂ ನಿನ್ನೆ ನಡೆದ ಗೋವು ಕಳ್ಳತನ ಪ್ರಕರಣದಲ್ಲಿ ಆರೋಪಿಗಳನ್ನು ಅಲ್ಪಾವಧಿಯಲ್ಲೇ ಬಂಧಿಸಿರುವುದು ಪೊಲೀಸರ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ ಎಂದು ಜಯರಾಮ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

ಅಪರಾಧ ಪ್ರಕರಣಗಳನ್ನು ಸಿನಿಮಾ ಶೈಲಿಯ ಕಾರ್ಯಾಚರಣೆಯ ಮೂಲಕ ಭೇದಿಸುತ್ತಿರುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಶ್ರಮ ಶ್ಲಾಘನೀಯವಾಗಿದೆ. ಪ್ರತಿಯೊಂದು ಪ್ರಕರಣವನ್ನೂ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿರುವುದರಿಂದ ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯ ಮೇಲಿನ ನಂಬಿಕೆ ಮತ್ತಷ್ಟು ಬಲಗೊಂಡಿದೆ ಎಂದು ಅವರು ಹೇಳಿದರು.

ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆಗೆ ಅಪರಾಧಿಗಳನ್ನು ಶೀಘ್ರವೇ ಬಂಧಿಸಿ, ಸಂತ್ರಸ್ತರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಪೊಲೀಸರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅವರ ಈ ದಕ್ಷ ಸೇವೆ ಎಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಮುಂದೆಯೂ ಇದೇ ರೀತಿಯ ನಿಷ್ಠೆ, ಪ್ರಾಮಾಣಿಕತೆ ಮತ್ತು ವೇಗದ ತನಿಖೆಯ ಮೂಲಕ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸುವ ಕೆಲಸ ಮುಂದುವರಿಯಲಿ,” ಎಂದು ಜಯರಾಮ್ ಶೆಟ್ಟಿ ಆಶಿಸಿದರು.

ಪೊಲೀಸರ ಈ ನಿರಂತರ ಕಾರ್ಯಾಚರಣೆಗಳಿಂದ ಅಪರಾಧ ಕೃತ್ಯಗಳಿಗೆ ಕಡಿವಾಣ ಬೀಳುವಂತಾಗಿದ್ದು, ಸಾರ್ವಜನಿಕರಲ್ಲಿ ಸುರಕ್ಷತೆಯ ಭಾವನೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹೊಸನಗರ ಹಾಗೂ ರಿಪ್ಪನ್‌ಪೇಟೆ ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿ ಮಾದರಿಯಾಗಿದ್ದು, ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಅವರ ಸೇವೆಯನ್ನು ಮುಕ್ತಕಂಠದಿಂದ ಪ್ರಶಂಸಿಸುತ್ತಿದ್ದಾರೆ.