ರಿಪ್ಪನ್‌ಪೇಟೆ: ಮಲೆನಾಡು ಭಾಗದಲ್ಲಿ ಇತ್ತೀಚೆಗೆ ಜಾನುವಾರು ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ರೈತರಲ್ಲಿ ಆತಂಕ ಮನೆಮಾಡಿತ್ತು. ತೀರ್ಥಹಳ್ಳಿ, ಸಾಗರ, ಹೊಸನಗರ ಸೇರಿದಂತೆ ಹಲವು ಭಾಗಗಳಲ್ಲಿ ಗೋ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದ ಹಿನ್ನೆಲೆ, ಕಳ್ಳರ ಜಾಲವನ್ನು ಭೇದಿಸುವುದು ಪೊಲೀಸರಿಗೆ ಸವಾಲಾಗಿತ್ತು. ಆದರೆ ಈ ಸವಾಲನ್ನು ಧೈರ್ಯ, ಚಾಣಾಕ್ಷತೆ ಮತ್ತು ಅಚಲ ಕರ್ತವ್ಯನಿಷ್ಠೆಯಿಂದ ಎದುರಿಸಿದ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ರಾಜು ರೆಡ್ಡಿ ನೇತೃತ್ವದ ತಂಡ, ಕೇವಲ 15 ದಿನಗಳಲ್ಲೇ ಆರೋಪಿಗಳನ್ನು ಬಂಧಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಜುಲೈ 3, 2026ರ ರಾತ್ರಿ ರಿಪ್ಪನ್‌ಪೇಟೆ ಪಟ್ಟಣದ ಸಾಗರ ರಸ್ತೆಯಲ್ಲಿರುವ ಗಿರಿಗೌಡ ಅವರ ಮನೆಯ ಸಮೀಪ ಐಷರಾಮಿ ಇನ್ನೋವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು ದನಗಳನ್ನು ಕಳವು ಮಾಡಿ ಪರಾರಿಯಾಗಿದ್ದರು. ದುಬಾರಿ ಕಾರು ಬಳಸಿದ್ದರಿಂದ ಸ್ಥಳೀಯರಿಗೆ ಆರಂಭದಲ್ಲಿ ಯಾವುದೇ ಅನುಮಾನ ಮೂಡಿರಲಿಲ್ಲ. ಈ ಸಂಬಂಧ ಹಿಂದೂ ಜಾಗರಣ ವೇದಿಕೆಯ ಮುಖಂಡ ದೇವರಾಜ್ ಕೆರೆಹಳ್ಳಿ ಅವರು ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರು ದಾಖಲಾದ ತಕ್ಷಣವೇ ಪಿಎಸ್‌ಐ ರಾಜು ರೆಡ್ಡಿ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದರು. ಡಿವೈಎಸ್‌ಪಿ ಅರವಿಂದ್ ಕಲಗುಜ್ಜಿ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್ ಗೌಡಪ್ಪ ಗೌಡರ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ ತನಿಖೆಯನ್ನು ಚುರುಕುಗೊಳಿಸಿದರು. ಸಿಸಿಟಿವಿ ದೃಶ್ಯಗಳು, ತಾಂತ್ರಿಕ ಮಾಹಿತಿ ಹಾಗೂ ಗುಪ್ತಚರ ಜಾಲದ ನೆರವಿನಿಂದ ಕಳ್ಳರ ಹೆಜ್ಜೆ ಗುರುತುಗಳನ್ನು ಪತ್ತೆಹಚ್ಚಿದ ಪೊಲೀಸರು, ಕೇವಲ 15 ದಿನಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಇನ್ನೋವಾ ಕಾರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಶಿವಮೊಗ್ಗದ ಹಳೆಮಂಡ್ಲಿಯ ಅಮೀರ್ ಸುಹೇಲ್ (26) ಹಾಗೂ ಮಹಮ್ಮದ್ ಇಸ್ರಾರ್ ಉಲ್ಲಾ ಖಾನ್ (20) ಎಂದು ಗುರುತಿಸಲಾಗಿದೆ. ಇವರ ವಿರುದ್ಧ ಇನ್ನೂ ಬೇರೆಡೆ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವ ಸಾಧ್ಯತೆಯ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಈ ಯಶಸ್ಸಿನ ಹಿಂದೆ ಪಿಎಸ್‌ಐ ರಾಜು ರೆಡ್ಡಿ ಅವರ ದಕ್ಷ ನಾಯಕತ್ವವೇ ಪ್ರಮುಖ ಕಾರಣ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕರ್ತವ್ಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಅವರ ಕಾರ್ಯವೈಖರಿ ಈಗಾಗಲೇ ಹಲವು ಬಾರಿ ಜನರ ಗಮನ ಸೆಳೆದಿದೆ. ಈ ಹಿಂದೆ ಬಸ್ ನಿಲ್ದಾಣದಲ್ಲಿ ಅನಾಥವಾಗಿ ಬಿಟ್ಟುಹೋಗಿದ್ದ ಹೆಣ್ಣು ಮಗುವಿನ ಪ್ರಕರಣವನ್ನು ಭೇದಿಸಿ ಮಗುವನ್ನು ಸುರಕ್ಷಿತವಾಗಿ ರಕ್ಷಿಸಿ, ಆರೋಪಿಗಳನ್ನು ಬಂಧಿಸಿದ್ದ ಅವರ ಮಾನವೀಯ ಕಾರ್ಯ ಇಂದಿಗೂ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಈಗ ಗೋ ಕಳ್ಳರ ವಿರುದ್ಧವೂ ಅದೇ ದಿಟ್ಟತನ ಪ್ರದರ್ಶಿಸಿ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ರಾಮಚಂದ್ರ ಎನ್.ಎಂ., ಅಶೋಕ್, ವಿಶ್ವನಾಥ್, ಪರಮೇಶ್ವರಪ್ಪ ಹಾಗೂ ಅವಿನಾಶ್ ಅವರ ಶ್ರಮವೂ ಅತ್ಯಂತ ಗಮನಾರ್ಹವಾಗಿದೆ. ಹಗಲು-ರಾತ್ರಿ ಎನ್ನದೆ ತನಿಖೆ ನಡೆಸಿ, ಪ್ರತಿಯೊಂದು ಸುಳಿವನ್ನೂ ಬೆನ್ನಟ್ಟಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ. ತಂಡದ ಒಗ್ಗಟ್ಟು, ಶಿಸ್ತು ಮತ್ತು ಕರ್ತವ್ಯನಿಷ್ಠೆಯೇ ಈ ಯಶಸ್ಸಿನ ಮೂಲವೆಂದು ಪೊಲೀಸ್ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಈ ಕಾರ್ಯಾಚರಣೆ ಕೇವಲ ಇಬ್ಬರು ಆರೋಪಿಗಳ ಬಂಧನಕ್ಕೆ ಸೀಮಿತವಾಗಿಲ್ಲ; ಕಾನೂನಿನ ಕೈಯಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸಮಾಜಕ್ಕೆ ರವಾನಿಸಿದೆ. ರೈತರು ಹಾಗೂ ಸಾರ್ವಜನಿಕರು ರಿಪ್ಪನ್‌ಪೇಟೆ ಪೊಲೀಸರ ದಕ್ಷ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದು, ಪಿಎಸ್‌ಐ ರಾಜು ರೆಡ್ಡಿ ಮತ್ತು ಅವರ ತಂಡದ ಈ ಬೆಂಕಿ ಕಾರ್ಯಾಚರಣೆ ಮಲೆನಾಡಿನ ಜನರಲ್ಲಿ ಮತ್ತೆ ಭರವಸೆ ಮೂಡಿಸಿದೆ.