ಹೊಸನಗರ: ಸಮಾಜದ ಸಂಘಟನೆ, ಸೇವಾ ಕಾರ್ಯ, ಗೋಸೇವೆ ಹಾಗೂ ವ್ಯಕ್ತಿತ್ವ ವಿಕಸನದಂತಹ ಹಲವು ಸಮಾಜಮುಖಿ ಚಟುವಟಿಕೆಗಳ ಮೂಲಕ ಸಾರ್ವಜನಿಕರ ಮನ್ನಣೆಗೆ ಪಾತ್ರವಾಗಿರುವ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ–ಅಖಿಲ ಭಾರತ ಹಿಂದು ಮಹಾಸಭಾ ಹೊಸನಗರ ಘಟಕದ ನೂತನ ಸಂಚಾಲನಾ ಸಮಿತಿಯನ್ನು ಜುಲೈ 9ರಂದು ಹೊಸನಗರದ ಶ್ರೀ ಗಣಪತಿ ದೇವಸ್ಥಾನದ ಲವಿಶಾ ಮಂಟಪದಲ್ಲಿ ಆಯ್ಕೆ ಮಾಡಲಾಯಿತು.

ನೂತನ ಸಮಿತಿಯ ಗೌರವ ಸಂಚಾಲಕರಾಗಿ (ಗೌರವಾಧ್ಯಕ್ಷ) ಕೆ.ಎಸ್. ವಿನಾಯಕ ಶ್ರೇಷ್ಠಿ, ಪ್ರಧಾನ ಸಂಚಾಲಕರಾಗಿ (ಅಧ್ಯಕ್ಷ) ಗಣೇಶ್ ಮಧುಕರ್, ಕಾರ್ಯ ಸಂಚಾಲಕರಾಗಿ (ಕಾರ್ಯದರ್ಶಿ) ಅನೂಪ್ ಅರವಿಂದ್, ಪ್ರಧಾನ ಕೋಶಾಧಿಕಾರಿಯಾಗಿ ನಾಗರಾಜ್ ಆರ್. (ಗುರೂಜಿ) ಹಾಗೂ ಸಾಂಸ್ಕೃತಿಕ ವೇಿಕೆ ಸಂಚಾಲಕರಾಗಿ ಮಂಜುನಾಥ್ ಪೂಜಾರಿ ಅವರನ್ನು ಮುಂದಿನ ಎರಡು ವರ್ಷಗಳ ಅವಧಿಗೆ ನಿಯುಕ್ತಿಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನೂತನ ಗೌರವ ಸಂಚಾಲಕ ಕೆ.ಎಸ್. ವಿನಾಯಕ ಶ್ರೇಷ್ಠಿ, “ಕೇವಲ ನಮ್ಮ ಅಧಿಕಾರಾವಧಿಯಲ್ಲಿ ಮಾತ್ರ ಸಹಕಾರ ನೀಡದೆ, ಪ್ರತಿವರ್ಷವೂ ಸಮಿತಿಯ ವಿವಿಧ ಕಾರ್ಯಗಳಲ್ಲಿ ಎಲ್ಲರೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಸಮಾಜದಲ್ಲಿ ನಮ್ಮ ಸಮಿತಿಯ ಮೇಲಿರುವ ವಿಶ್ವಾಸವನ್ನು ಇನ್ನಷ್ಟು ವೃದ್ಧಿಸೋಣ” ಎಂದು ಕರೆ ನೀಡಿದರು

ಪ್ರಧಾನ ಸಂಚಾಲಕ ಗಣೇಶ್ ಮಧುಕರ್ ಮಾತನಾಡಿ, “ಸಮಿತಿಯ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಸಮಾಜದ ಎಲ್ಲ ಸಮುದಾಯ, ಪಂಥ ಹಾಗೂ ಸಂಪ್ರದಾಯದವರು ಒಗ್ಗೂಡಬೇಕು. ಸಂಘಟಿತ ಸಮಾಜದ ಮೂಲಕ ಸಮರ್ಥ ಹೊಸನಗರ ನಿರ್ಮಾಣವಾಗಲಿ” ಎಂದು ಆಶಿಸಿದರು

ಕಾರ್ಯ ಸಂಚಾಲಕ ಅನೂಪ್ ಅರವಿಂದ್ ಅವರು ನೂತನ ಸಮಿತಿ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಎಲ್ಲ ಕಾರ್ಯಕರ್ತರು ಹಾಗೂ ಸದಸ್ಯರಿಗೆ ಧನ್ಯವಾದ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ರಮೇಶ್ ಹಲಸಿನಕಟ್ಟೆ, ರಾಧಾಕೃಷ್ಣ ಪೂಜಾರಿ, ಸುರೇಂದ್ರ ಕೋಟ್ಯಾನ್, ಆಟೋ ಪ್ರಶಾಂತ್, ಸಂತೋಷ್ ಶ್ರೀನಂದಿ, ಕೆ. ವಿನಯ್ ಕುಮಾರ್ ಸೇರಿದಂತೆ ಹಲವು ಕಾರ್ಯಕರ್ತರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಪ್ರತಿಯೊಂದು ಹುದ್ದೆಯ ಆಯ್ಕೆಯಲ್ಲೂ ಸೂಚಕರು ಮತ್ತು ಅನುಮೋದಕರು ಭಾಗವಹಿಸಿದ್ದು, ಅತ್ಯಂತ ಸರಳ ಹಾಗೂ ವ್ಯವಸ್ಥಿತವಾಗಿ ಆಯ್ಕೆ ಪ್ರಕ್ರಿಯೆ ನಡೆಯಿತು.