ಶಿವಮೊಗ್ಗ ಜಿಲ್ಲೆಯ ತಳಲೆ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಅಗ್ನಿ ಅವಘಡದಲ್ಲಿ ಅಡಿಕೆ ತೋಟ ಭಾರೀ ಹಾನಿಗೊಳಗಾದ ಘಟನೆ ಬೆಳಕಿಗೆ ಬಂದಿದೆ. ಗ್ರಾಮದ ಸರ್ವೆ ನಂ. 60ರಲ್ಲಿ ಇರುವ ಹುಚ್ಚಾನಾಯ್ಕ್ ಅವರಿಗೆ ಸೇರಿದ ಸುಮಾರು 38 ಗುಂಟೆ ವ್ಯಾಪ್ತಿಯ ತೋಟದಲ್ಲಿ ಈ ದುರ್ಘಟನೆ ಸಂಭವಿಸಿದೆ.ವಿದ್ಯುತ್ ಸಂಪರ್ಕದ ಲೈನ್ ತಾಗಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ತೋಟದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಕವಾಗಿ ಹರಡಿದೆ. ಪರಿಣಾಮವಾಗಿ ಅಡಿಕೆ, ತೆಂಗು ಹಾಗೂ ಬಾಳೆ ಗಿಡಗಳು ಸುಟ್ಟು ಕರಕಲಾಗಿವೆ.ಘಟನೆಯಲ್ಲಿ 350ಕ್ಕೂ ಹೆಚ್ಚು ಅಡಿಕೆ ಮರಗಳು ಸಂಪೂರ್ಣವಾಗಿ ನಾಶವಾಗಿದ್ದು, ರೈತನಿಗೆ ಲಕ್ಷಾಂತರ ರೂಪಾಯಿ ಆರ್ಥಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಸ್ಥಳೀಯರು ತಕ್ಷಣವೇ ಬೆಂಕಿ ನಂದಿಸಲು ಹರಸಾಹಸ ಪಟ್ಟರೂ ಹೆಚ್ಚಿನ ಹಾನಿಯನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.ಈ ಕುರಿತು ತೋಟದ ಮಾಲೀಕರು ರಿಪ್ಪನ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಈ ಅವಘಡಕ್ಕೆ ವಿದ್ಯುತ್ ಇಲಾಖೆಯ ನಿರ್ಲಕ್ಷ್ಯ ಕಾರಣವೇ ಎಂಬುದನ್ನು ತನಿಖೆಯಿಂದ ತಿಳಿದುಬರುವ ನಿರೀಕ್ಷೆಯಿದೆ.ಸ್ಥಳೀಯರು ವಿದ್ಯುತ್ ಲೈನ್‌ಗಳ ನಿಯಮಿತ ಪರಿಶೀಲನೆ ಹಾಗೂ ಸಮರ್ಪಕ ನಿರ್ವಹಣೆ ಅಗತ್ಯವಿದೆ ಎಂದು ಒತ್ತಾಯಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ವ್ಯಕ್ತವಾಗಿದೆ.

By Anjan Kerehalli

ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ನಮ್ಮ ಧ್ವನಿ, ನಿಮ್ಮ ಹಕ್ಕು ಮಲ್ಲಾಡ್ ಸುದ್ದಿ ಎಕ್ಸ್ಪ್ರೆಸ್ ದು ಮಲೆನಾಡ ಜನರ ಧ್ವನಿ “ನಮ್ಮ ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ಜನರೊಂದಿಗೆ, ಜನರಿಗಾಗಿ.”

Leave a Reply

Your email address will not be published. Required fields are marked *