ಬಸ್ ನಿಲ್ದಾಣದಲ್ಲಿ ಅನಾಥವಾಗಿ ಬಿಟ್ಟ ನವಜಾತ ಹೆಣ್ಣು ಮಗು: ಕಲ್ಲಾದಿತ್ತೇ ಹೆತ್ತವರ ಹೃದಯ? ಸಮಯಪ್ರಜ್ಞೆಯಿಂದ ಉಳಿದ ಪುಟ್ಟ ಜೀವರಿಪ್ಪನ್‌ಪೇಟೆ, ಜುಲೈ 6: ತಾಯಿಯ ಮಡಿಲಿನಲ್ಲಿ ಇರಬೇಕಿದ್ದ ಪುಟ್ಟ ಕಂದಮ್ಮ… ಪ್ರೀತಿಯ ಮುತ್ತುಗಳನ್ನು ಪಡೆಯಬೇಕಿದ್ದ ನವಜಾತ ಹೆಣ್ಣು ಮಗು… ಆದರೆ ವಿಧಿಯಾಟವೇ ಬೇರೆ ಆಗಿತ್ತು. ಕೇವಲ 10 ರಿಂದ 15 ದಿನಗಳ ಪ್ರಾಯದ ಹೆಣ್ಣು ಶಿಶುವೊಂದನ್ನು ಯಾರೋ ಕ್ರೂರ ಮನಸ್ಸಿನವರು ಕೈಚೀಲದಲ್ಲಿ ಬಟ್ಟೆಯಲ್ಲಿ ಸುತ್ತಿ, ಹಾಲಿನ ಬಾಟಲ್ ಜೊತೆಗೆ ಗವಟೂರು ಹೊಳೆ ಸಮೀಪದ ನಿರ್ಜನ ಬಸ್ ನಿಲ್ದಾಣದಲ್ಲಿ ಅನಾಥವಾಗಿ ಬಿಟ್ಟು ಹೋಗಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.ಕತ್ತಲು ಆವರಿಸಿದ್ದ ರಾತ್ರಿ… ಸುತ್ತಮುತ್ತ ಯಾರೂ ಇಲ್ಲದ ನಿಶ್ಶಬ್ದ ವಾತಾವರಣ… ಆ ಮೌನವನ್ನು ಚೀರಿದದ್ದು ಆ ಪುಟ್ಟ ಕಂದಮ್ಮನ ಅಳುವಿನ ಧ್ವನಿ. ರಾತ್ರಿ ಸುಮಾರು 9 ಗಂಟೆ ವೇಳೆಗೆ ಬಸ್ ನಿಲ್ದಾಣದ ಹಿಂಭಾಗದ ನಿವಾಸಿಯೊಬ್ಬರಿಗೆ ಮಗುವಿನ ಅಳುವಿನ ಶಬ್ದ ಕೇಳಿಬಂದಿದೆ. ಅನುಮಾನಗೊಂಡ ಅವರು ಸ್ಥಳಕ್ಕೆ ತೆರಳಿ ನೋಡಿದಾಗ, ಕೈಚೀಲದಲ್ಲಿ ನಡುಗುತ್ತಾ ಮಲಗಿದ್ದ ನವಜಾತ ಹೆಣ್ಣು ಮಗು ಕಂಡು ಬೆಚ್ಚಿಬಿದ್ದರು.ತಕ್ಷಣವೇ ಅವರು ರಿಪ್ಪನ್‌ಪೇಟೆ ಪೊಲೀಸರಿಗೆ ಮಾಹಿತಿ ನೀಡಿದರು.

ಸುದ್ದಿ ತಿಳಿಯುತ್ತಿದ್ದಂತೆ ಪಿಎಸ್‌ಐ ರಾಜುರೆಡ್ಡಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದರು. ಸುಮಾರು 1.6 ಕೆ.ಜಿ. ತೂಕವಿರುವ ಈ ಪುಟ್ಟ ಕಂದಮ್ಮ ಆರೋಗ್ಯವಾಗಿದ್ದು, ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಆರೈಕೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಅಮಾಯಕ ಮಗುವನ್ನು ಯಾರು, ಯಾವ ಕಾರಣಕ್ಕಾಗಿ ಈ ರೀತಿ ಅನಾಥವಾಗಿ ಬಿಟ್ಟು ಹೋಗಿದ್ದಾರೆ ಎಂಬುದು ಇನ್ನೂ ನಿಗೂಢವಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.ಈ ಘಟನೆ ಮತ್ತೊಮ್ಮೆ ಸಮಾಜದ ಮನಸ್ಸಿಗೆ ಪ್ರಶ್ನೆ ಹಾಕಿದೆ. ಹೆಣ್ಣು ಮಗುವಾಗಿ ಜನಿಸಿದ್ದೇ ಆಕೆಯ ತಪ್ಪೇ? ಜೀವ ನೀಡಿದವರು ಜೀವವನ್ನೇ ಬೀದಿಗೆ ಬಿಸಾಡುವಷ್ಟು ಪರಿಸ್ಥಿತಿ ಏನಿತ್ತು? ಇಂತಹ ನಿರ್ಧಾರಕ್ಕೆ ಕಾರಣವೇನು? ಎಂಬ ಪ್ರಶ್ನೆಗಳು ಸಾರ್ವಜನಿಕರನ್ನು ಕಾಡುತ್ತಿವೆ.ಆದರೆ, ಆ ರಾತ್ರಿ ಆ ಪುಟ್ಟ ಜೀವದ ಅಳುವನ್ನು ಕೇಳಿ ಸ್ಪಂದಿಸಿದ ಸ್ಥಳೀಯ ನಿವಾಸಿ ಹಾಗೂ ಸಮಯಪ್ರಜ್ಞೆಯಿಂದ ಕಾರ್ಯನಿರ್ವಹಿಸಿದ ಪೊಲೀಸ್ ಸಿಬ್ಬಂದಿಯ ಮಾನವೀಯತೆ, ಆ ಕಂದಮ್ಮನ ಬದುಕಿಗೆ ಹೊಸ ಆಶಾಕಿರಣವಾಗಿದೆ. ಆ ಪುಟ್ಟ ಜೀವಕ್ಕೆ ಸುರಕ್ಷಿತ, ಪ್ರೀತಿಯ ಭವಿಷ್ಯ ಸಿಗಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.

By Anjan Kerehalli

ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ನಮ್ಮ ಧ್ವನಿ, ನಿಮ್ಮ ಹಕ್ಕು ಮಲ್ಲಾಡ್ ಸುದ್ದಿ ಎಕ್ಸ್ಪ್ರೆಸ್ ದು ಮಲೆನಾಡ ಜನರ ಧ್ವನಿ “ನಮ್ಮ ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ಜನರೊಂದಿಗೆ, ಜನರಿಗಾಗಿ.”

Leave a Reply

Your email address will not be published. Required fields are marked *