ರಿಪ್ಪನ್‌ಪೇಟೆ, ಜುಲೈ 6: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ರಿಪ್ಪನ್‌ಪೇಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಕ ಹಾನಿ ಸಂಭವಿಸಿದೆ. ಭಾರೀ ಗಾಳಿಯಿಂದ 60ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರಿಂದ ಸಾರ್ವಜನಿಕರು ಕತ್ತಲಲ್ಲೇ ದಿನ ಕಳೆಯುವ ಪರಿಸ್ಥಿತಿ ಎದುರಾಗಿದೆ.

ಹಲವೆಡೆ ರಸ್ತೆ ಬದಿಯಲ್ಲಿದ್ದ ಬೃಹತ್ ಮರಗಳು ವಿದ್ಯುತ್ ಕಂಬಗಳ ಮೇಲೆ ಉರುಳಿ ಬಿದ್ದ ಪರಿಣಾಮ ಕಂಬಗಳು ಮುರಿದು ನೆಲಕ್ಕುರುಳಿವೆ. ಇದರಿಂದ ವಿದ್ಯುತ್ ತಂತಿಗಳು ಸಹ ಹಾನಿಗೊಳಗಾಗಿ ವಿದ್ಯುತ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ

ರಿಪ್ಪನ್‌ಪೇಟೆ, ಬಾಳೂರು, ಕೋಡೂರು, ಚಿಕ್ಕಜೇನಿ, ಬೆಳ್ಳೂರು, ಹೆದ್ದಾರಿಪುರ, ಅರಸಾಳು, ಗರ್ತಿಕೆರೆ ಸೇರಿದಂತೆ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ನಿವಾಸಿಗಳು ಅಗತ್ಯ ಸೇವೆಗಳ ಕೊರತೆಯನ್ನು ಎದುರಿಸುತ್ತಿದ್ದಾರೆ.

ಮೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಳೆ ನಡುವೆಯೇ ಹಾನಿಗೊಳಗಾದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ, ಹೊಸ ಕಂಬಗಳನ್ನು ಅಳವಡಿಸುವ ಹಾಗೂ ವಿದ್ಯುತ್ ಸಂಪರ್ಕವನ್ನು ಪುನಃಸ್ಥಾಪಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿದ್ದಾರೆ.

ಈ ಕುರಿತು ಮೆಸ್ಕಾಂ ಸಹಾಯಕ ಇಂಜಿನಿಯರ್ ಅಶ್ವಲ್ ಮಾತನಾಡಿ, “ಹಾನಿಗೊಳಗಾದ ಪ್ರದೇಶಗಳಲ್ಲಿ ಹೊಸ ವಿದ್ಯುತ್ ಕಂಬಗಳನ್ನು ಅಳವಡಿಸುವ ಕಾರ್ಯ ವೇಗವಾಗಿ ನಡೆಯುತ್ತಿದೆ. ಸಾಧ್ಯವಾದಷ್ಟು ಬೇಗ ಎಲ್ಲ ಗ್ರಾಮಗಳಿಗೂ ವಿದ್ಯುತ್ ಸಂಪರ್ಕ ಪುನಃ ಕಲ್ಪಿಸಲಾಗುವುದು. ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು,” ಎಂದು ಮನವಿ ಮಾಡಿದ್ದಾರೆ.

By Anjan Kerehalli

ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ನಮ್ಮ ಧ್ವನಿ, ನಿಮ್ಮ ಹಕ್ಕು ಮಲ್ಲಾಡ್ ಸುದ್ದಿ ಎಕ್ಸ್ಪ್ರೆಸ್ ದು ಮಲೆನಾಡ ಜನರ ಧ್ವನಿ “ನಮ್ಮ ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ಜನರೊಂದಿಗೆ, ಜನರಿಗಾಗಿ.”

Leave a Reply

Your email address will not be published. Required fields are marked *