
ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಮದ್ಯ ಮಾರಾಟ: ಬೆಳ್ಳೂರಿನಲ್ಲಿ ಕಿರಾಣಿ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ
ಶಿವಮೊಗ್ಗ : ಜಿಲ್ಲೆಯ ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ಳೂರು ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಹಾಗೂ ಸೇವನೆಗೆ ಅವಕಾಶ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ನಡೆಸಿದ ದಾಳಿ ವೇಳೆ ಈ ಘಟನೆ ಪತ್ತೆಯಾಗಿದೆ.ಪೊಲೀಸ್ ಮಾಹಿತಿಯ ಪ್ರಕಾರ, ತಾಣ ವ್ಯಾಪ್ತಿಯಲ್ಲಿ ರೌಂಡ್ಸ್‌ನಲ್ಲಿ ಇದ್ದ ವೇಳೆ, ಬೆಳ್ಳೂರು ಗ್ರಾಮದ ಶರತ್ (ತಂದೆ: ಓಮಪ್ಪ) ಅವರ ಕಿರಾಣಿ ಅಂಗಡಿಯ ಮುಂದೆ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಚಿಲ್ಲರೆ ಬ್ರ್ಯಾಂಡಿ ಪೌಚ್‌ಗಳನ್ನು ನೀಡಿ ಕುಡಿಯಲು ಅವಕಾಶ ಮಾಡಿಕೊಡುತ್ತಿದ್ದಾನೆ ಎಂಬ ಮಾಹಿತಿ ದೊರಕಿತು.
ತಕ್ಷಣವೇ ಪೊಲೀಸರು ಸ್ಥಳಕ್ಕೆ ತೆರಳಿ ದಾಳಿ ನಡೆಸಿದರು.ಅಂಗಡಿಯ ಬಳಿ ಮರೆಯಲ್ಲಿ ನಿಂತು ಗಮನಿಸಿದಾಗ, ಶರತ್ ಅವರು ಸಾರ್ವಜನಿಕ ಸ್ಥಳದಲ್ಲೇ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟು ಜನರಿಗೆ ತೊಂದರೆ ಉಂಟುಮಾಡುತ್ತಿರುವುದು ಕಂಡುಬಂದಿತು.
ಕೂಡಲೇ ಪೊಲೀಸರು ಹಾಗೂ ಪಂಚರ ಸಮ್ಮುಖದಲ್ಲಿ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದರು.ಆರೋಪಿಯಿಂದ 90 ಎಂಎಲ್ “Original Choice Deluxe Whisky” ಎಂಬ ಲೇಬಲ್ ಹೊಂದಿರುವ ಮೂರು ಖಾಲಿ ಮದ್ಯದ ಪೌಚ್‌ಗಳು ಹಾಗೂ ಒಂದು ಪ್ಲಾಸ್ಟಿಕ್ ಲೋಟವನ್ನು ವಶಪಡಿಸಿಕೊಳ್ಳಲಾಗಿದೆ. ಈ ಪೌಚ್‌ಗಳನ್ನು ಸಾರ್ವಜನಿಕರಿಗೆ ಚಿಲ್ಲರೆ ಮಾರಾಟ ಮಾಡಿ ಕುಡಿಯಲು ಅವಕಾಶ ನೀಡಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಪಂಚನಾಮೆ ಪ್ರಕ್ರಿಯೆ ಪೂರ್ಣಗೊಳಿಸಿ ವಶಪಡಿಸಿಕೊಂಡ ವಸ್ತುಗಳನ್ನು ಅಮಾನತ್ತುಪಡಿಸಿ, ಆರೋಪಿಗೆ ನೋಟೀಸ್ ಜಾರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಈ ಸಂಬಂಧ ದೂರು ದಾಖಲಿಸಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.ಈ ಘಟನೆ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮ ಮದ್ಯ ಮಾರಾಟ ಇನ್ನೂ ನಡೆಯುತ್ತಿರುವುದನ್ನು ತೋರಿಸುತ್ತಿದ್ದು, ಇಂತಹ ಕೃತ್ಯಗಳ ವಿರುದ್ಧ ರಿಪ್ಪನ್ ಪೇಟೆಯ ಪೊಲೀಸರಾದ ರಾಜು ರೆಡ್ಡಿ ಅವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ರಾಮಚಂದ್ರಪ್ಪ, ಉಮೇಶ್ ಹಾಗೂ ವಿಶ್ವನಾಥ್ ಭಾಗಿಯಾಗಿದ್ದರು.



Leave a Reply