ಬೆಳ್ತಂಗಡಿ, ಫೆ.14: ತಿಥಿ ಕಾರ್ಯಕ್ರಮದಲ್ಲಿ ವಿಶೇಷ ಪದಾರ್ಥವಾಗಿ ಆಮೆ ಮಾಂಸ ಬಡಿಸಲು ಅಕ್ರಮವಾಗಿ ಬೇಟೆಯಾಡುತ್ತಿದ್ದ ನಾಲ್ವರನ್ನು ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿ ಬಂಧಿಸಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ

ಅಜ್ಜಿ ದೇವಮ್ಮ ಅವರ ಉತ್ತರಕ್ರಿಯೆ ಕಾರ್ಯಕ್ರಮದ ನಿಮಿತ್ತ ಫೆಬ್ರವರಿ 13ರಂದು ಸಂಬಂಧಿಕರು ಬೆಳ್ತಂಗಡಿಗೆ ಆಗಮಿಸಿದ್ದರು. ಅಜ್ಜಿಗೆ ಇಷ್ಟವಾದ ಆಮೆ ಪದಾರ್ಥವನ್ನು ತಿಥಿ ಕಾರ್ಯಕ್ರಮದಲ್ಲಿ ಬಡಿಸಲು ನಿರ್ಧರಿಸಿದ ಅವರು, ಫೆಬ್ರವರಿ 14ರಂದು ಮಧ್ಯಾಹ್ನ ಬೆಳ್ತಂಗಡಿ ನಗರದ ಸೋಮವತಿ ನದಿಗೆ ತೆರಳಿ ಅಕ್ರಮವಾಗಿ ನಾಲ್ಕು ಆಮೆಗಳನ್ನು ಬೇಟೆಯಾಡಿದ್ದಾರೆ.ನದಿ ತೀರದಲ್ಲಿ ಆಮೆಗಳನ್ನು ಸುಟ್ಟು ಮಾಂಸ ಮಾಡಲು ಯತ್ನಿಸುತ್ತಿದ್ದ ವೇಳೆ, ಖಚಿತ ಮಾಹಿತಿ ಆಧರಿಸಿ ಫೆ.14 ರಂದು ಸಂಜೆ ಸುಮಾರು 3.30ಕ್ಕೆ ಬೆಳ್ತಂಗಡಿ ಸಬ್ ಇನ್ಸ್‌ಪೆಕ್ಟರ್ ಆನಂದ್.ಎಮ್ ಅವರ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿತು. ದಾಳಿಯಲ್ಲಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು, ಅವರ ಬಳಿ ಇದ್ದ ನಾಲ್ಕು ಸುಟ್ಟ ಆಮೆಗಳನ್ನು ಜಪ್ತಿ ಮಾಡಲಾಯಿತು.ನಂತರ ಪ್ರಕರಣವನ್ನು ಮುಂದಿನ ತನಿಖೆಗಾಗಿ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಯಿತು. ಅರಣ್ಯ ಇಲಾಖೆಯ ಅಧಿಕಾರಿಗಳು ಮಹಜರು ನಡೆಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡರು. ವಿಚಾರಣೆ ನಡೆಸಿದ ಬಳಿಕ ಆರೋಪಿಗಳಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್ ನೀಡಿ ಅದೇ ದಿನ ರಾತ್ರಿ ಬಿಡುಗಡೆ ಮಾಡಲಾಗಿದೆ.ಈ ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿನಿ ಸಿ.ಕೆ ಹಾಗೂ ಇನ್ಸ್‌ಪೆಕ್ಟರ್ ಬಿ.ಜಿ. ಸುಬ್ಬಾಪುರ ಮಠ ಮಾರ್ಗದರ್ಶನ ನೀಡಿದರು. ಸಬ್ ಇನ್ಸ್‌ಪೆಕ್ಟರ್ ಆನಂದ್.ಎಮ್ ನೇತೃತ್ವದಲ್ಲಿ ಎಎಸ್‌ಐ ಕುಶಾಲಪ್ಪ, ಹೆಡ್ ಕಾನ್ಸ್ಟೇಬಲ್ ಪ್ರಮೋದ್, ಪಂಪಾಪತಿ, ಪ್ರಕಾಶ್, ಶ್ವೇತಾ, ಸವಿತಾ ಹಾಗೂ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್, ಡಿ.ಆರ್.ಎಫ್.ಒ ಕಿರಣ್ ಪಾಟೀಲ್, ಸಂದೀಪ್, ಬೀಟ್ ಫಾರೆಸ್ಟರ್ ಪರಶುರಾಮ ಮೇಟಿ, ದಿವಾಕರ್ ಮತ್ತು ವಾಹನ ಚಾಲಕ ಕುಶಾಲಪ್ಪ ಗೌಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.ಅಕ್ರಮವಾಗಿ ವನ್ಯಜೀವಿಗಳನ್ನು ಬೇಟೆಯಾಡುವುದು ಕಾನೂನುಬಾಹಿರವಾಗಿದ್ದು, ಇಂತಹ ಘಟನೆಗಳು ಪರಿಸರ ಮತ್ತು ಜೈವ ವೈವಿಧ್ಯತೆಗೆ ಅಪಾಯಕಾರಿಯಾಗಿದೆ.
ವರದಿ : ಕೆರೇಹಳ್ಳಿ ಅಂಜನ್