ಹೊಸನಗರ: ತಾಲೂಕಿನ ಹುಂಚಾ ಹೋಬಳಿಯ ತಿಣಿವೆ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಲವು ವರ್ಷಗಳಿಂದ ಮುಂದುವರಿದಿರುವ ಮೊಬೈಲ್ ನೆಟ್ವರ್ಕ್ ಸಮಸ್ಯೆಗೆ ಬೇಸತ್ತ ಗ್ರಾಮಸ್ಥರು ಇದೀಗ ಪಾದಯಾತ್ರೆ ನಡೆಸಲು ತೀರ್ಮಾನಿಸಿದ್ದಾರೆ.

ತಿಣಿವೆ ಗ್ರಾಮಪಂಚಾಯಿತಿ ವ್ಯಾಪ್ತಿಯ ತಿಣಿವೆ, ಬಿಣಕಿ, ತೊಗರೆ, ಜಕ್ಕನಗದ್ದೆ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ಸಂಪರ್ಕ ವ್ಯವಸ್ಥೆಯ ಕೊರತೆ ತೀವ್ರವಾಗಿ ಅನುಭವವಾಗುತ್ತಿದೆ. ಸಮರ್ಪಕ ಮೊಬೈಲ್ ಸಿಗ್ನಲ್ ಇಲ್ಲದ ಕಾರಣ ವಿದ್ಯಾರ್ಥಿಗಳು, ಉದ್ಯೋಗಸ್ಥರು ಹಾಗೂ ಆನ್‌ಲೈನ್ ಸೇವೆಗಳ ಮೇಲೆ ಅವಲಂಬಿತರಾದ ಜನರ ಸಂಕಷ್ಟ ಎದುರಿಸುತ್ತಿದ್ದಾರೆ.
ಟವರ್ಗೆ ಜಾಗ ಮಂಜೂರು, ಆದರೆ ಸಮಸ್ಯೆ ಯಥಾಸ್ಥಿತಿ
ಗ್ರಾಮಸ್ಥರ ಮಾಹಿತಿ ಪ್ರಕಾರ, ಸುಮಾರು ನಾಲ್ಕು ವರ್ಷಗಳ ಹಿಂದೆ ಮೊಬೈಲ್ ಟವರ್ ಸ್ಥಾಪನೆಗೆ ಜಾಗ ಮಂಜೂರಾಗಿದ್ದರೂ, ಇದುವರೆಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ. ಸಮಸ್ಯೆ ಪರಿಹರಿಸುವಂತೆ ಹಲವಾರು ಬಾರಿ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದರೂ ಸ್ಪಂದನೆ ಸಿಗಲಿಲ್ಲವೆಂದು ಅವರು ಆರೋಪಿಸಿದ್ದಾರೆ.
ಪಾದಯಾತ್ರೆ ಮೂಲಕ ಹೋರಾಟಸ
ರ್ವಧರ್ಮ ಸೌಹಾರ್ದ ಟ್ರಸ್ಟ್ ಅಧ್ಯಕ್ಷ ಜಯರಾಮ ಶೆಟ್ಟಿ ಅವರ ನೇತೃತ್ವದಲ್ಲಿ ತಿಣಿವೆ ಗ್ರಾಮದಿಂದ ಹೊಸನಗರ ದಂಡಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಮುಂಬರುವ ದಿನಗಳಲ್ಲಿ ಈ ಪಾದಯಾತ್ರೆ ನಡೆಸಲಾಗುವುದು ಎಂದು ತಿಳಿಸಲಾಗಿದೆ.
ವಿದ್ಯಾರ್ಥಿಗಳು, ಉದ್ಯೋಗಸ್ಥರಿಗೆ ಸಂಕಷ್ಟ
ನೆಟ್ವರ್ಕ್ ಸಮಸ್ಯೆಯಿಂದ ವಿದ್ಯಾರ್ಥಿಗಳ ಆನ್‌ಲೈನ್ ಶಿಕ್ಷಣಕ್ಕೆ ಅಡಚಣೆ ಉಂಟಾಗಿದೆ. ಉದ್ಯೋಗಸ್ಥರು ತಮ್ಮ ದೈನಂದಿನ ಕಾರ್ಯ ನಿರ್ವಹಣೆಯಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ ಸಂಪರ್ಕ ವ್ಯವಸ್ಥೆ ಇಲ್ಲದಿರುವುದು ಭದ್ರತೆ ದೃಷ್ಟಿಯಿಂದಲೂ ಆತಂಕಕಾರಿಯಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸರ್ಕಾರಕ್ಕೆ ಎಚ್ಚರಿಕೆ
ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ತಿಣಿವೆ ಗ್ರಾಮಕ್ಕೆ ಸಮರ್ಪಕ ಮೊಬೈಲ್ ನೆಟ್ವರ್ಕ್ ಸೌಲಭ್ಯ ಒದಗಿಸಬೇಕು. ಇಲ್ಲವಾದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ವರದಿ : ಕೆರೆಹಳ್ಳಿ ಅಂಜನ್