ತೀರ್ಥಹಳ್ಳಿ : ಹೆಚ್ಚಿನ ಲಾಭ ಹಾಗೂ ಗ್ಯಾರಂಟಿ ರಿಟರ್ನ್ ನೀಡುವುದಾಗಿ ನಂಬಿಸಿ ನಕಲಿ ಹೂಡಿಕೆ ಯೋಜನೆ ಮೂಲಕ ಸುಮಾರು ₹48 ಲಕ್ಷ ವಂಚನೆ ನಡೆಸಿದ ಆರೋಪದ ಮೇಲೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.

ತೀರ್ಥಹಳ್ಳಿಯ ನಿವಾಸಿ ಅರುಣ್ ಕುಮಾರ್ ಹಾಲಪ್ಪ ನಾಯ್ಕ ನೀಡಿದ ದೂರಿನ ಮೇರೆಗೆ, ಎಂ. ಕುಮಾರ್ (ಎ1), ಕುಸುಮಾ (ಎ2), ಜೀವನ್ (ಎ3), ಸಮೃದ್ಧಿ (ಎ4) ಹಾಗೂ ಶ್ವೇತಾ (ಎ5) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ದೂರಿನ ಪ್ರಕಾರ, ಎಂ. ಕುಮಾರ್ ಅವರು ತಾವು ಸಹ್ಯಾದ್ರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರಾಗಿದ್ದು, “ಯು-ಬಿಟ್ ಕಾಯಿನ್” ಎಂಬ ಹೂಡಿಕೆ ಯೋಜನೆಯಲ್ಲಿ ಹಣ ಹೂಡಿದರೆ ಹೆಚ್ಚಿನ ಲಾಭ ಹಾಗೂ ಖಾತರಿಯ ಆದಾಯ ದೊರೆಯುತ್ತದೆ ಎಂದು ನಂಬಿಸಿದ್ದರು. ತಮ್ಮ ಮೊಬೈಲ್‌ನಲ್ಲಿ ಕಂಪನಿಯ ಲಾಭದ ವಿವರಗಳನ್ನು ತೋರಿಸಿ ವಿಶ್ವಾಸ ಮೂಡಿಸಿ, ದೂರುದಾರರಿಂದ ₹11 ಲಕ್ಷ ಹಣವನ್ನು ಹೂಡಿಕೆ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಆದರೆ ಬಳಿಕ ಹೂಡಿಕೆ ಮಾಡಿದ ಹಣವನ್ನಾಗಲಿ, ಭರವಸೆ ನೀಡಿದ್ದ ಲಾಭವನ್ನಾಗಲಿ ಹಿಂದಿರುಗಿಸದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದೇ ರೀತಿಯಲ್ಲಿ ಇನ್ನೂ ಹಲವರಿಂದ ಹಣ ಪಡೆದು, ಒಟ್ಟು ಸುಮಾರು ₹48 ಲಕ್ಷ ವಂಚಿಸಿರುವುದಾಗಿಯೂ ತಿಳಿಸಲಾಗಿದೆ.

ಹಣವನ್ನು ವಾಪಸ್ ಕೇಳಿದಾಗ ಜೀವ ಬೆದರಿಕೆ ಹಾಕಿರುವ ಆರೋಪವೂ ದೂರಿನಲ್ಲಿ ಉಲ್ಲೇಖವಾಗಿದೆ.

ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 316(2), 318(4), 351(2), 61(2) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಕಲಂ 66(D) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.