
ರಿಪ್ಪನ್‌ಪೇಟೆ: ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯಾಗಿ ಡಿ .ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸಿದ ಹಿನ್ನೆಲೆ ಸಚಿವ ಸಂಪುಟ ರಚನೆಯ ಚಟುವಟಿಕೆಗಳು ಭರ್ಜರಿಯಾಗಿ ಸಾಗುತ್ತಿವೆ. ಈ ನಡುವೆ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ದೊರಕಬೇಕು ಎಂಬ ಕೂಗು ಕ್ಷೇತ್ರದಾದ್ಯಂತ ಕೇಳಿಬರುತ್ತಿದ್ದು, ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ವಿವಿಧ ರೀತಿಯಲ್ಲಿ ತಮ್ಮ ಆಶಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ತಮ್ಮ ನೆಚ್ಚಿನ ನಾಯಕ ಗೋಪಾಲಕೃಷ್ಣ ಬೇಳೂರು ಅವರು ಸಚಿವರಾಗಬೇಕು ಎಂಬ ಹಾರೈಕೆಯೊಂದಿಗೆ ರಿಪ್ಪನ್‌ಪೇಟೆಯ ಗ್ಯಾರಂಟಿ ಯೋಜನೆಯ ಸದ್ಯಸ ಹಾಗೂ ಕಾಂಗ್ರೆಸ್ ಮುಖಂಡ ಫ್ಯಾನ್ಸಿ ರಮೇಶ್ ಅವರು ವಿಶೇಷ ಹರಕೆ ಹೊತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಧರ್ಮಸ್ಥಳಕ್ಕೆ ತೆರಳಿ ಮುಡಿಕೊಟ್ಟು ದೇವರ ಆಶೀರ್ವಾದ ಪಡೆದಿದ್ದಾರೆ. ಅವರೊಂದಿಗೆ ಯೂಥ್ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಮಳವಳ್ಳಿ ಸಹ ಭಾಗವಹಿಸಿ ತಮ್ಮ ನಾಯಕನ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.
ಇದೊಂದೇ ಅಲ್ಲದೆ, ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ದೊರಕಲೆಂದು ಫ್ಯಾನ್ಸಿ ರಮೇಶ್ ಅವರು ಇತ್ತೀಚೆಗಷ್ಟೇ ತಿರುಪತಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಂದಿದ್ದಾರೆ. ಜೊತೆಗೆ, ಕೊರಗಜ್ಜ ಶ್ರೀ ಕ್ಷೇತ್ರ ದೇವಾಲಯಕ್ಕೂ ಹರಕೆ ಹೊತ್ತು ಭೇಟಿ ನೀಡಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿರುವುದು ಗಮನ ಸೆಳೆದಿದೆ.
ತಮ್ಮ ನೆಚ್ಚಿನ ಶಾಸಕರನ್ನು ಸಚಿವರಾಗಿ ಕಾಣಬೇಕು ಎಂಬ ಬಯಕೆಯಿಂದ ಫ್ಯಾನ್ಸಿ ರಮೇಶ್ ಅವರು ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಹರಕೆಗಳನ್ನು ಸಲ್ಲಿಸುತ್ತಿದ್ದು, ಇದು ಅವರ ನಾಯಕನ ಮೇಲಿನ ಅಪಾರ ಅಭಿಮಾನ ಮತ್ತು ವಿಶ್ವಾಸಕ್ಕೆ ಸಾಕ್ಷಿಯಾಗಿದೆ.
ಸಾಗರ-ಹೊಸನಗರ ಕ್ಷೇತ್ರದಲ್ಲಿ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ದೊರಕಬೇಕು ಎಂಬ ಒತ್ತಾಯ ದಿನೇದಿನೇ ಹೆಚ್ಚಾಗುತ್ತಿದ್ದು, ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ತಮ್ಮ ಬೆಂಬಲವನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಅವರ ಸೇವೆ ಮತ್ತಷ್ಟು ವಿಸ್ತಾರವಾಗಲಿ ಎಂಬ ಆಶಯದೊಂದಿಗೆ ಜನರು ಸಚಿವ ಸ್ಥಾನಕ್ಕಾಗಿ ನಿರೀಕ್ಷೆಯಲ್ಲಿದ್ದಾರೆ.ಧರ್ಮಸ್ಥಳದಲ್ಲಿ ಮುಡಿಕೊಟ್ಟು, ತಿರುಪತಿಗೆ ಭೇಟಿ ನೀಡಿ, ಹೊರಗಡ್ಜೆ ಶ್ರೀ ಕ್ಷೇತ್ರದಲ್ಲಿಯೂ ಹರಕೆ ಹೊತ್ತು ವಿಶೇಷ ಪ್ರಾರ್ಥನೆ ಸಲ್ಲಿಸಿರುವ ಫ್ಯಾನ್ಸಿ ರಮೇಶ್ ಹಾಗೂ ಯುವ ನಾಯಕ ವಿಜಯ್ ಅವರ ನಡೆ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಸಚಿವ ಸಂಪುಟ ವಿಸ್ತರಣೆಯಲ್ಲಿ ಗೋಪಾಲಕೃಷ್ಣ ಬೇಳೂರು ಅವರಿಗೆ ಅವಕಾಶ ದೊರೆಯುತ್ತದೆಯೇ ಎಂಬ ಕುತೂಹಲ ಕ್ಷೇತ್ರದ ಜನರಲ್ಲಿ ಹೆಚ್ಚಾಗಿದೆ.