ಹೊಸನಗರ : ರಂಗಕರ್ಮಿ ದಿವಂಗತ ಯೇಸು ಪ್ರಕಾಶ್ ಅವರ ಸ್ಮರಣಾರ್ಥವಾಗಿ, ಸಾರಾ ಸಂಸ್ಥೆಯ ಸಹಯೋಗದಲ್ಲಿ ಕೆರೆ ಬಸವಣ್ಣ ಶೇಡಿನ ಕೆರೆ ಬಳಕೆದಾರರ ಸಂಘ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಸಕ್ರಿಯ ಸಹಕಾರದೊಂದಿಗೆ ಪುನಶ್ಚೇತನಗೊಂಡ ‘ಕೆರೆ ಬಸವಣ್ಣ ಶೇಡಿನ ಕೆರೆ’ಯ ಭವ್ಯ ಲೋಕಾರ್ಪಣೆ ಸಮಾರಂಭ ಶನಿವಾರ ನೆರವೇರಿತು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ. ರಾಘವೇಂದ್ರ ಅವರು ಕೆರೆಯನ್ನು ಉದ್ಘಾಟಿಸಿ ಸಾರ್ವಜನಿಕ ಬಳಕೆಗೆ ಸಮರ್ಪಿಸಿದರು.

ಜಲಕ್ರಾಂತಿ ಯೋಜನೆ ಗ್ರಾಮೀಣ ಅಭಿವೃದ್ಧಿಗೆ ಪೂರಕ

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ ಅವರು, ಜಲಮೂಲಗಳ ಸಂರಕ್ಷಣೆ ಹಾಗೂ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಕೈಗೊಂಡಿರುವ ಜಲಕ್ರಾಂತಿ ಯೋಜನೆ ಭವಿಷ್ಯದಲ್ಲಿ ರೈತ ಸಮುದಾಯ ಮತ್ತು ಸಾರ್ವಜನಿಕರಿಗೆ ವರದಾನವಾಗಲಿದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿರುವ ಕೆರೆಗಳನ್ನು ಜನಾಂದೋಲನದ ರೂಪದಲ್ಲಿ ಪುನಶ್ಚೇತನಗೊಳಿಸುವ ಕಾರ್ಯ ಮಲೆನಾಡಿನ ಸುಸ್ಥಿರ ಅಭಿವೃದ್ಧಿಗೆ ಅತ್ಯಂತ ಪೂರಕವಾಗಿದ್ದು, ಇಂತಹ ಪ್ರಯತ್ನಗಳು ಪರಿಸರ ಸಂರಕ್ಷಣೆಗೂ ಸಹಕಾರಿಯಾಗಲಿವೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮವು ತಾಲೂಕಿನ ಮೂಲೆಗದ್ದೆಯ ಸದಾನಂದ ಶಿವಯೋಗಾಶ್ರಮದ ಶ್ರೀ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ, ಸಾರಾ ಸಂಸ್ಥೆಯ ಪದಾಧಿಕಾರಿಗಳು, ಸ್ಥಳೀಯ ಸಂಘಟನೆಗಳ ಮುಖಂಡರು, ವಾಟಾಗೋಡು ಸುರೇಶ್ ಸೇರಿದಂತೆ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಜನಸಹಭಾಗಿತ್ವದ ಮೂಲಕ ಜಲಮೂಲಗಳ ಪುನರುಜ್ಜೀವನಕ್ಕೆ ಮಾದರಿಯಾಗಿರುವ ಕೆರೆ ಬಸವಣ್ಣ ಶೇಡಿನ ಕೆರೆ ಯೋಜನೆ, ಮಲೆನಾಡಿನಲ್ಲಿ ಜಲಸಂರಕ್ಷಣೆ ಕುರಿತ ಜಾಗೃತಿ ಮತ್ತು ಸಮೂಹ ಸಹಕಾರದ ಮಹತ್ವವನ್ನು ಮತ್ತೊಮ್ಮೆ ಸಾರಿದೆ.

By Anjan Kerehalli

ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ನಮ್ಮ ಧ್ವನಿ, ನಿಮ್ಮ ಹಕ್ಕು ಮಲ್ಲಾಡ್ ಸುದ್ದಿ ಎಕ್ಸ್ಪ್ರೆಸ್ ದು ಮಲೆನಾಡ ಜನರ ಧ್ವನಿ “ನಮ್ಮ ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ಜನರೊಂದಿಗೆ, ಜನರಿಗಾಗಿ.”

Leave a Reply

Your email address will not be published. Required fields are marked *