ಆಟೋ ಚಾಲಕ ಸಂತೋಷ್ ಕುಟುಂಬಕ್ಕೆ ಆರ್ಥಿಕ ಸಹಾಯ – ಆಯುಷ್ಮಾನ್ ಕಾರ್ಡ್ ಮಾಡಿಸಿಕೊಳ್ಳುವಂತೆ ಜನರಿಗೆ ಮನವಿ

ರಿಪ್ಪನಪೇಟೆ ಸಾಮಾನ್ಯ ಕುಟುಂಬವೊಂದರ ಸಂಕಷ್ಟದ ಸಂದರ್ಭದಲ್ಲಿ ಮಾಜಿ ಶಾಸಕರಾದ ಹಾಲಪ್ಪ ಅವರು ಮಾನವೀಯತೆ ಮೆರೆದ ಘಟನೆ ಜನಮನ ಸೆಳೆಯುತ್ತಿದೆ. ಆಟೋ ಚಾಲಕರಾಗಿ ದುಡಿಯುತ್ತಿರುವ ಸಂತೋಷ್ ಅವರ ಪುತ್ರ ಜೀವನ್ ಮೆದುಳು ಜ್ವರದಿಂದ ಬಳಲುತ್ತಿದ್ದ ಪರಿಣಾಮ ಕುಟುಂಬವು ತೀವ್ರ ಆತಂಕಕ್ಕೆ ಒಳಗಾಗಿತ್ತು. ಕೆಲ ದಿನಗಳ ಕಾಲ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರೂ, ಶಿವಮೊಗ್ಗದ ವೈದ್ಯರ ಸೂಕ್ತ ಚಿಕಿತ್ಸೆ ಹಾಗೂ ಸಲಹೆಯಿಂದ ಇದೀಗ ಜೀವನ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವುದು ಕುಟುಂಬಕ್ಕೆ ಸ್ವಲ್ಪ ನೆಮ್ಮದಿ ತಂದಿದೆ.
ಆದರೆ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ನಡೆದ ವೆಚ್ಚ ಮಾತ್ರ ಕುಟುಂಬಕ್ಕೆ ದೊಡ್ಡ ಹೊರೆ ಆಗಿತ್ತು. ಸಾಮಾನ್ಯ ಆದಾಯದ ಮೇಲೆ ಜೀವನ ಸಾಗಿಸುತ್ತಿರುವ ಸಂತೋಷ್ ಕುಟುಂಬಕ್ಕೆ ಮಗನ ಚಿಕಿತ್ಸೆಯ ವೆಚ್ಚ ಭಾರೀ ಆರ್ಥಿಕ ಸಂಕಷ್ಟವನ್ನು ತಂದಿತ್ತು. ಈ ವಿಷಯ ತಿಳಿದ ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಕುಟುಂಬವನ್ನು ಭೇಟಿ ಮಾಡಿ ಧೈರ್ಯ ತುಂಬಿದರು. ಕೇವಲ ಮಾತಿನ ಸಾಂತ್ವನವಷ್ಟೇ ಅಲ್ಲದೆ, ಕುಟುಂಬಕ್ಕೆ ತಕ್ಷಣದ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದರು.
ಈ ಸಂದರ್ಭದಲ್ಲಿ ಮಾತನಾಡಿದ ಹರತಾಳು ಹಾಲಪ್ಪ ಅವರು, “ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಆರೋಗ್ಯ ಸಮಸ್ಯೆಗಳು ಎದುರಾದಾಗ ದೊಡ್ಡ ಸಮಸ್ಯೆ ಹಣದ ಅಭಾವವಾಗುತ್ತದೆ. ಆಸ್ಪತ್ರೆ ವೆಚ್ಚ ಭರಿಸಲು ಅನೇಕ ಕುಟುಂಬಗಳು ಸಾಲದ ಬಾಧೆಗೆ ಒಳಗಾಗುತ್ತವೆ. ಆದ್ದರಿಂದ ಸರ್ಕಾರ ನೀಡುತ್ತಿರುವ ಆರೋಗ್ಯ ಯೋಜನೆಗಳ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು,” ಎಂದು ಹೇಳಿದರು.
ಇದೇ ವೇಳೆ ಅವರು ಕುಟುಂಬದ ಸದಸ್ಯರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು. “ಆಯುಷ್ಮಾನ್ ಕಾರ್ಡ್ ಇದ್ದರೆ ಬಡ ಕುಟುಂಬಗಳಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಉಚಿತ ಚಿಕಿತ್ಸೆ ಸಿಗುತ್ತದೆ. ಸರ್ಕಾರದ ಯೋಜನೆಗಳ ಬಗ್ಗೆ ಜನರಲ್ಲಿ ಇನ್ನೂ ಅರಿವು ಕಡಿಮೆ ಇದೆ. ಪ್ರತಿಯೊಬ್ಬ ಬಡ ಕುಟುಂಬವೂ ಈ ಯೋಜನೆಯ ಸೌಲಭ್ಯ ಪಡೆಯಬೇಕು,” ಎಂದು ಅವರು ತಿಳಿಸಿದರು.
ಅವರು ಇನ್ನೂ ಮಾತನಾಡಿ, “ಒಂದು ಕುಟುಂಬದಲ್ಲಿ ಆರೋಗ್ಯ ಸಮಸ್ಯೆ ಎದುರಾದರೆ ಆ ಕುಟುಂಬದ ಆರ್ಥಿಕ ಸ್ಥಿತಿ ಸಂಪೂರ್ಣ ಕುಸಿದು ಹೋಗುತ್ತದೆ. ಬಡವರು ಹಣದ ಕೊರತೆಯಿಂದ ಚಿಕಿತ್ಸೆ ತಡಮಾಡಬಾರದು. ಸರ್ಕಾರದ ಯೋಜನೆಗಳು ಜನರಿಗೆ ನೆರವಾಗಲೆಂದೇ ಇವೆ. ಅವುಗಳ ಬಗ್ಗೆ ತಿಳಿದುಕೊಂಡು ಎಲ್ಲರೂ ಪ್ರಯೋಜನ ಪಡೆದುಕೊಳ್ಳಬೇಕು,” ಎಂದು ಮನವಿ ಮಾಡಿದರು.ಜೀವನ್ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿರುವುದಕ್ಕೆ ವೈದ್ಯರ ಸೇವೆಯನ್ನು ಕುಟುಂಬದವರು ಕೃತಜ್ಞತೆಯಿಂದ ಸ್ಮರಿಸಿದರು. “ವೈದ್ಯರು ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಿದ ಕಾರಣ ನಮ್ಮ ಮಗನ ಪ್ರಾಣ ಉಳಿದಿದೆ. ಹಲವರು ಸಹಾಯ ಮಾಡುತ್ತಿದ್ದಾರೆ. ನಾವು ಅವರಿಗೆ ಸದಾ ಋಣಿಯಾಗಿರುತ್ತೇವೆ,” ಎಂದು ಕುಟುಂಬದವರು ಭಾವುಕರಾಗಿ ಹೇಳಿದರು
ಈ ವೇಳೆ ಸಂಘದ ಹಿರಿಯರಾದ ಆರ್.ಟಿ. ಗೋಪಾಲ್, ಹೊಸನಗರ ಶಕ್ತಿ ಕೇಂದ್ರದ ಅಧ್ಯಕ್ಷರಾದ ಎನ್. ಸತೀಶ್, ಕೆರೆಹಳ್ಳಿ ಹೋಬಳಿ ಅಧ್ಯಕ್ಷರಾದ ಸುಂದರೇಶ್, ಪಕ್ಷದ ಪ್ರಮುಖರಾದ ಮನಸೆ ಆನಂದ್, ಕಾರ್ಮಿಕರ ಅಧ್ಯಕ್ಷರಾದ ಮಹಮ್ಮದ್ ಹುಸೇನ್, ಶಕ್ತಿ ಕೇಂದ್ರದ ಕಾರ್ಯದರ್ಶಿ ಮಲ್ಲಿಕಾರ್ಜುನ, ಶಂಕರಾಚಾರ್, ರಾಘವೇಂದ್ರ, ಮಂಜುನಾಥ್ ಆಚಾರ್, ಪಿ. ರಮೇಶ್ ಸೇರಿದಂತೆ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.ಸಾಮಾಜಿಕವಾಗಿ ಹಿಂದುಳಿದ ಕುಟುಂಬಗಳ ನೋವಿಗೆ ಸ್ಪಂದಿಸಿ ನೆರವು ನೀಡುತ್ತಿರುವ ಹರತಾಳು ಹಾಲಪ್ಪ ಅವರ ಕಾರ್ಯವನ್ನು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು. ಆರೋಗ್ಯ ಸಮಸ್ಯೆ ಎದುರಾದಾಗ ಮಾನವೀಯತೆ ಮತ್ತು ಸಹಕಾರ ಎಷ್ಟು ಮುಖ್ಯವೆಂಬುದಕ್ಕೆ ಈ ಘಟನೆ ಮತ್ತೊಮ್ಮೆ ಸಾಕ್ಷಿಯಾಗಿದೆ.



Leave a Reply