ಅರಸಾಳು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ಮೇಲೆ ಪೊಲೀಸ್ ದಾಳಿ – ಆರೋಪಿತನ ಬಂಧನ……!!??

Posted by

ಅರಸಾಳು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ಮೇಲೆ ಪೊಲೀಸ್ ದಾಳಿ – ಆರೋಪಿತನ ಬಂಧನ

ರಿಪ್ಪನ್‌ಪೇಟೆ ಠಾಣಾ ವ್ಯಾಪ್ತಿಯ ಅರಸಾಳು ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಸೇವನೆಗೆ ಅವಕಾಶ ನೀಡುತ್ತಿದ್ದ ವ್ಯಕ್ತಿಯ ವಿರುದ್ಧ ಪೊಲೀಸರು ದಾಳಿ ನಡೆಸಿ ಆರೋಪಿತನನ್ನು ವಶಕ್ಕೆ ಪಡೆದ ಘಟನೆ ಬುಧವಾರ ನಡೆದಿದೆ.ದಿನಾಂಕ 20/05/2026 ರಂದು ಬೆಳಿಗ್ಗೆ ಸುಮಾರು 09:45 ಗಂಟೆಗೆ ಅರಸಾಳು ಗ್ರಾಮದ ಬೋರೆಗೌಡ ತಂದೆ ಮರಿಯಪ್ಪ ಅವರ ಕಿರಾಣಿ ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಬ್ರಾಂಡಿ ಪೌಚ್‌ಗಳನ್ನು ಚಿಲ್ಲರೆಯಾಗಿ ನೀಡಿ ಮದ್ಯಪಾನ ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತು. ಈ ಮಾಹಿತಿ ಮೇರೆಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಜು ರೆಡ್ಡಿಯವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಉಮೇಶ್, ಮಂಜುನಾಥ್, ವಿಶ್ವನಾಥ್ ಹಾಗೂ ಅವಿನಾಶ್ ಅವರೊಂದಿಗೆ ಬೆಳಿಗ್ಗೆ 10:15 ಗಂಟೆಗೆ ಸ್ಥಳಕ್ಕೆ ದಾಳಿ ನಡೆಸಲಾಯಿತು.ದಾಳಿಯ ವೇಳೆ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದ್ದ ಆರೋಪಿತನನ್ನು ಪೊಲೀಸರು ವಶಕ್ಕೆ ಪಡೆದರು. ಆರೋಪಿತನ ಬಳಿಯಿಂದ 90 ಎಂಎಲ್ ಸಾಮರ್ಥ್ಯದ “ORIGINAL CHOICE DELUXE WHISKY” ಎಂಬ ಲೇಬಲ್ ಹೊಂದಿದ 11 ಮದ್ಯದ ಪೌಚ್‌ಗಳು ಪತ್ತೆಯಾಗಿದ್ದು, ಪ್ರತಿ ಪೌಚ್‌ನ ಬೆಲೆ 50 ರೂ.ಗಳಂತೆ ಒಟ್ಟು ಮೌಲ್ಯ 550 ರೂ. ಆಗಿರುತ್ತದೆ.ಇದಲ್ಲದೆ “Haywards Cheers Whisky” ಎಂಬ ಲೇಬಲ್ ಹೊಂದಿದ 04 ಖಾಲಿ ಪೌಚ್‌ಗಳು ಹಾಗೂ 02 ಪ್ಲಾಸ್ಟಿಕ್ ಲೋಟಗಳು ಪತ್ತೆಯಾಗಿದ್ದು, ಅವುಗಳನ್ನು ಪೊಲೀಸರು ಅಮಾನತ್ತುಪಡಿಸಿಕೊಂಡಿದ್ದಾರೆ. ಆರೋಪಿತನ ವಿರುದ್ಧ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಸೇವನೆಗೆ ಅವಕಾಶ ನೀಡಿದ ಆರೋಪದಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ.ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವ ಘಟನೆಗಳು ಹೆಚ್ಚಾಗುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಅಪಕಾರಿ ಇಲಾಖೆಯ ಅಧಿಕಾರಿಗಳು ಇಂತಹ ಅಕ್ರಮ ಚಟುವಟಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. “ಹಳ್ಳಿ ಹಳ್ಳಿಗಳಲ್ಲಿಯೇ ಅಕ್ರಮ ಮದ್ಯ ಮಾರಾಟ ಹೆಚ್ಚಾಗುತ್ತಿದೆ. ಎಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆಯೋ ಅದನ್ನು ತಕ್ಷಣ ತಡೆಹಿಡಿಯಬೇಕು” ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.ಈ ರೀತಿಯ ಅಕ್ರಮ ಚಟುವಟಿಕೆಗಳ ವಿರುದ್ಧ ದಿಟ್ಟ ಕ್ರಮ ಕೈಗೊಂಡ ರಿಪ್ಪನ್‌ಪೇಟೆ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ದಾಳಿ ನಡೆಸಿದ ಪೊಲೀಸ್ ಇಲಾಖೆ ಸಿಬ್ಬಂದಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *