ನಾಯಿಯ ದಾಳಿಯಿಂದ ಮರಿ ಹಸು ರಕ್ಷಣೆ: ಕಗ್ಲಿ ಲಿಂಗಪ್ಪ ಹಾಗೂ ಸ್ನೇಹಿತರ ಮಾನವೀಯತೆಗೆ ಭಾರಿ ಮೆಚ್ಚುಗೆರಿಪ್ಪನಪೇಟೆ ಸಮೀಪದ ತೀರ್ಥಹಳ್ಳಿ ರಸ್ತೆಯಲ್ಲಿ ನಿನ್ನೆ ರಾತ್ರಿ ನಡೆದ ಮನಕಲಕುವ ಘಟನೆ ಒಂದು ಮಾನವೀಯತೆಯ ನಿಜವಾದ ಮುಖವನ್ನೇ ಅನಾವರಣಗೊಳಿಸಿದೆ. ರಾತ್ರಿ ಸುಮಾರು 9.30ರ ವೇಳೆಗೆ ನಾಯಿಯೊಂದು ಪುಟ್ಟ ಹಸುವಿನ ಕರುವನ್ನು ಕಚ್ಚಿ ಎಳೆದೊಯ್ಯುತ್ತಿದ್ದ ಸಂದರ್ಭ, ಕಗ್ಲಿ ಲಿಂಗಪ್ಪ ಹಾಗೂ ಅವರ ಸ್ನೇಹಿತರು ಸಮಯಪ್ರಜ್ಞೆ ಮೆರೆದು ಕರುವನ್ನು ರಕ್ಷಿಸಿ ಜೀವ ಉಳಿಸಿದ ಘಟನೆ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.

ತೀರ್ಥಹಳ್ಳಿ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಕಗ್ಲಿ ಲಿಂಗಪ್ಪ ಅವರು ರಸ್ತೆಯ ಬದಿಯಲ್ಲಿ ನಾಯಿಯೊಂದು ಕರುವನ್ನು ದಾಳಿ ಮಾಡುತ್ತಿರುವ ದೃಶ್ಯವನ್ನು ಗಮನಿಸಿದ್ದಾರೆ. ತಕ್ಷಣವೇ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಅವರು ಮಂಜುನಾಥ್ ಆಚಾರ್, ಸುದೀದ್ರ ಪೂಜಾರಿ ಹಾಗೂ ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಎಲ್ಲರೂ ಕೂಡಲೇ ಸ್ಥಳಕ್ಕೆ ಧಾವಿಸಿ ನಾಯಿಯನ್ನು ಓಡಿಸಿ ಕರುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಾಯಿಯ ದಾಳಿಯಿಂದ ಕರು ಗಂಭೀರವಾಗಿ ಗಾಯಗೊಂಡಿದ್ದು, ರಕ್ತಸ್ರಾವವಾಗುತ್ತಿದ್ದ ಸ್ಥಿತಿಯಲ್ಲಿತ್ತು ಎನ್ನಲಾಗಿದೆ. ಆದರೂ ಕಗ್ಲಿ ಲಿಂಗಪ್ಪ ಮತ್ತು ಸ್ನೇಹಿತರು ಧೈರ್ಯ ಕಳೆದುಕೊಳ್ಳದೆ ಕರುವನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದು ಚಿಕಿತ್ಸೆ ವ್ಯವಸ್ಥೆ ಮಾಡಿದ್ದಾರೆ. ಬಳಿಕ ಪಶುವೈದ್ಯರಾದ ಡಾ. ರಾಮಚಂದ್ರ ಅವರನ್ನು ಸಂಪರ್ಕಿಸಲಾಗಿದ್ದು, ಅವರು ಕೂಡಲೇ ಸ್ಪಂದಿಸಿ ಉಚಿತವಾಗಿ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ಗಾಯಗೊಂಡಿದ್ದ ಕರುವಿಗೆ ಅಗತ್ಯ ಔಷಧೋಪಚಾರ ನೀಡಿ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.ಪ್ರಸ್ತುತ ಕರುವನ್ನು ಈಶ್ವರ್ ಶೆಟ್ಟರ ಮನೆಯಲ್ಲಿ ಆರೈಕೆ ಮಾಡಲಾಗುತ್ತಿದ್ದು, ಅದರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ ಎಂದು ತಿಳಿದು ಬಂದಿದೆ. ಆದರೆ ಈ ಕರು ತನ್ನ ತಾಯಿಯಿಂದ ಬೇರ್ಪಟ್ಟಿರುವುದು ಸ್ಥಳೀಯರಲ್ಲಿ ಬೇಸರ ಮೂಡಿಸಿದೆ. ಆದ್ದರಿಂದ ಕರುವಿನ ನಿಜವಾದ ಮಾಲೀಕರು ಮುಂದೆ ಬಂದು ಕರುವನ್ನು ಗುರುತಿಸಿ ಅದರ ತಾಯಿಯ ಬಳಿ ಸೇರಿಸುವಂತೆ ಮನವಿ ಮಾಡಲಾಗಿದೆ.

ಈ ಘಟನೆ ಕೇವಲ ಪ್ರಾಣಿಯ ರಕ್ಷಣೆ ಮಾತ್ರವಲ್ಲ, ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ರಾತ್ರಿ ಸಮಯದಲ್ಲಿಯೇ ಕಗ್ಲಿ ಲಿಂಗಪ್ಪ, ಮಂಜುನಾಥ್ ಆಚಾರ್, ಸುದೀದ್ರ ಪೂಜಾರಿ ಹಾಗೂ ರಾಘವೇಂದ್ರ ತೋರಿದ ಸಮಯಪ್ರಜ್ಞೆ, ಪ್ರಾಣಿಯ ಮೇಲಿನ ಕಾಳಜಿ ಹಾಗೂ ಸೇವಾಭಾವಕ್ಕೆ ಸ್ಥಳೀಯರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

By Anjan Kerehalli

ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ನಮ್ಮ ಧ್ವನಿ, ನಿಮ್ಮ ಹಕ್ಕು ಮಲ್ಲಾಡ್ ಸುದ್ದಿ ಎಕ್ಸ್ಪ್ರೆಸ್ ದು ಮಲೆನಾಡ ಜನರ ಧ್ವನಿ “ನಮ್ಮ ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ಜನರೊಂದಿಗೆ, ಜನರಿಗಾಗಿ.”

Leave a Reply

Your email address will not be published. Required fields are marked *