
ಸಾಗರ ತಾಲೂಕಿನ ಮಂಜಿನಕಾನು–ಹೀರೆಮನೆ ಗ್ರಾಮದ 72 ವರ್ಷದ ಮಂಜಪ್ಪ ಅವರು ಏಪ್ರಿಲ್ 4ರಂದು ವಾಂತಿ ಹಾಗೂ ಬೇದಿಯಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಪರೀಕ್ಷೆಯಲ್ಲಿ ಕೆಎಫ್‌ಡಿ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಇತರ ಆರೋಗ್ಯ ಸಮಸ್ಯೆಗಳೂ ಇದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಏಪ್ರಿಲ್ 8ರಂದು ಅವರು ಮೃತಪಟ್ಟಿದ್ದಾರೆ.
ಕೆಎಫ್‌ಡಿ ಒಂದು ವೈರಲ್ ಸೋಂಕಾಗಿದ್ದು, ಸಾಮಾನ್ಯವಾಗಿ ಕಾಡು ಪ್ರದೇಶಗಳಲ್ಲಿ ಕಂಡುಬರುವ ಟಿಕ್ ಕೀಟಗಳ ಮೂಲಕ ಹರಡುತ್ತದೆ. ಅರಣ್ಯ ಪ್ರದೇಶಗಳಲ್ಲಿ ಕೆಲಸ ಮಾಡುವವರು ಹಾಗೂ ಕಾಡು ಪ್ರದೇಶಗಳಿಗೆ ಹೋಗುವವರಿಗೆ ಇದರ ಅಪಾಯ ಹೆಚ್ಚು.
ಈ ಕಾಯಿಲೆಯ ಸಾಮಾನ್ಯ ಲಕ್ಷಣಗಳಲ್ಲಿ ಜ್ವರ, ತಲೆನೋವು, ವಾಂತಿ, ಬೇದಿ, ದೇಹ ನೋವು ಹಾಗೂ ದೌರ್ಬಲ್ಯ ಸೇರಿವೆ. ಇಂತಹ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ.ಕಾಡು ಪ್ರದೇಶಗಳಿಗೆ ತೆರಳುವವರು ಸಂಪೂರ್ಣ ದೇಹ ಮುಚ್ಚುವ ಬಟ್ಟೆ ಧರಿಸುವುದು, ಕೀಟಗಳಿಂದ ರಕ್ಷಣೆ ಪಡೆಯುವುದು ಮತ್ತು ಆರೋಗ್ಯ ಇಲಾಖೆ ನೀಡುವ ಲಸಿಕೆ ಪಡೆಯುವುದು ಉತ್ತಮ.
ಯಾವುದೇ ಲಕ್ಷಣ ಕಂಡುಬಂದಲ್ಲಿ ವಿಳಂಬ ಮಾಡದೇ ಆಸ್ಪತ್ರೆಗೆ ಭೇಟಿ ನೀಡಬೇಕು.2026ರಲ್ಲಿ ಜಿಲ್ಲೆಯಲ್ಲಿ ಇದುವರೆಗೆ 85 ಕೆಎಫ್‌ಡಿ ಪ್ರಕರಣಗಳು ದೃಢಪಟ್ಟಿದ್ದು, ಪ್ರಸ್ತುತ 11 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ಹರಡುವುದನ್ನು ತಡೆಯಲು ಆರೋಗ್ಯ ಇಲಾಖೆ ಗ್ರಾಮ ಮಟ್ಟದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ.
ಸರಿಯಾದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿದರೆ ಈ ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.




Leave a Reply