ಕೋಟ: ಸಾಸ್ತಾನ ಟೋಲ್ ಪ್ಲಾಜಾದಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿ, ಕಬ್ಬಿಣದ ರಾಡ್‌ನಿಂದ ಕೊಲೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಟೋಲ್ ಪ್ಲಾಜಾದಲ್ಲಿ ಕಳೆದ 8 ವರ್ಷಗಳಿಂದ ಅಸಿಸ್ಟಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಯೋಗೀಶ್ ಕುಮಾರ್ (42) ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಮಾರ್ಚ್ 24ರಂದು ರಾತ್ರಿ ಸುಮಾರು 8:00 ಗಂಟೆಯ ವೇಳೆಗೆ ಉಡುಪಿ ಕಡೆಯಿಂದ ಕುಂದಾಪುರದತ್ತ ಸಾಗುತ್ತಿದ್ದ ಬಸ್ಸೊಂದು ಟೋಲ್ ಪಾವತಿಸುತ್ತಿದ್ದ ವೇಳೆ, ಅದರ ಹಿಂದಿನಿಂದ ಬಂದ KA-54-**** ಸಂಖ್ಯೆಯ ಹೋಂಡಾ ಅಮೇಜ್ ಕಾರಿನಲ್ಲಿದ್ದ ವ್ಯಕ್ತಿಗಳು ದಾಂಧಲೆ ನಡೆಸಿದ್ದಾರೆ.
ಕಾರಿನಲ್ಲಿ ಇದ್ದ ವೆಂಕಟೇಶ ಪ್ರಸಾದ್ ಎಂಬಾತ ಕೆಳಗಿಳಿದು, “ಕಾರ್ ಬಿಡಲು ಯಾಕೆ ತಡ ಮಾಡುತ್ತೀರಿ?” ಎಂದು ಕೂಗಾಡುತ್ತಾ ಟೋಲ್ ಬ್ಯಾರಿಯರ್‌ಗೆ ಕಾಲಿನಿಂದ ಒದ್ದಿದ್ದಾನೆ. ಬಳಿಕ ಅಲ್ಲಿದ್ದ ಸಿಬ್ಬಂದಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ದೂಡಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಜಗಳ ತೀವ್ರವಾಗುತ್ತಿದ್ದಂತೆ, ಕಾರಿನಲ್ಲಿದ್ದ ರಿಪ್ಪನಪೇಟೆ ಮೂಲದ ವಿನಾಯಕ್ ಎಂಬಾತ ಕಬ್ಬಿಣದ ರಾಡ್ ಹಿಡಿದು ಸಿಬ್ಬಂದಿಗಳ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಆದರೆ ಸಿಬ್ಬಂದಿಗಳು ಸಮಯಪ್ರಜ್ಞೆ ಮೆರೆದು ಪಕ್ಕಕ್ಕೆ ಸರಿದ ಪರಿಣಾಮ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಘಟನೆಯನ್ನು ತಡೆಯಲು ಮುಂದಾದ ಮ್ಯಾನೇಜರ್ ಯೋಗೀಶ್ ಕುಮಾರ್ ಅವರಿಗೆ ಆರೋಪಿಗಳು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಬಳಿಕ ಚಾಲಕ ಧನುಷ್ ಕಾರನ್ನು ಚಲಾಯಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.

ವರದಿ : ಗಣೇಶ್ ರಿಪ್ಪನ್ ಪೇಟೆ

By Anjan Kerehalli

ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ನಮ್ಮ ಧ್ವನಿ, ನಿಮ್ಮ ಹಕ್ಕು ಮಲ್ಲಾಡ್ ಸುದ್ದಿ ಎಕ್ಸ್ಪ್ರೆಸ್ ದು ಮಲೆನಾಡ ಜನರ ಧ್ವನಿ “ನಮ್ಮ ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ಜನರೊಂದಿಗೆ, ಜನರಿಗಾಗಿ.”

Leave a Reply

Your email address will not be published. Required fields are marked *