
ಬೆಂಗಳೂರು: ನಗರದ ವಿವಿಧ ಭಾಗಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಕುಖ್ಯಾತ ಕಳ್ಳನೊಬ್ಬನನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಸುಮಾರು ₹5 ಲಕ್ಷ ಮೌಲ್ಯದ 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಮೂಲಕ 10 ಕಳವು ಪ್ರಕರಣಗಳು ಪತ್ತೆಯಾಗಿವೆ.
ಫೆಬ್ರವರಿ 15, 2026 ರಂದು ಬೊಮ್ಮನಹಳ್ಳಿ ವ್ಯಾಪ್ತಿಯ ರೂಪೇನಾ ಅಗ್ರಹಾರ ಬಸ್ ನಿಲ್ದಾಣದ ಹಿಂಭಾಗದ ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ ಕಳುವಾಗಿತ್ತು. ಈ ಸಂಬಂಧ ಆಡುಗೋಡಿ ನಿವಾಸಿಯೊಬ್ಬರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.
ಆಗ್ನೇಯ ವಿಭಾಗದ ಡಿಸಿಪಿ ಮೊಹಮ್ಮದ್ ಸುಜೀತ ಎಂ.ಎಸ್. ಅವರ ಮಾರ್ಗದರ್ಶನದಲ್ಲಿ ವಿಶೇಷ ಪೊಲೀಸ್ ತಂಡ ರಚಿಸಿ ತನಿಖೆ ಕೈಗೊಳ್ಳಲಾಯಿತು.
ಮಾರ್ಚ್ 5ರಂದು ಬಿ.ಟಿ.ಎಂ ಲೇಔಟ್‌ನ ಹೋಟೆಲ್ ಸಮೀಪ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ದ್ವಿಚಕ್ರ ವಾಹನ ಸಮೇತ ವಶಕ್ಕೆ ಪಡೆದರು. ವಿಚಾರಣೆ ವೇಳೆ ಆರೋಪಿಯು ನಗರದ ವಿವಿಧ ಭಾಗಗಳಲ್ಲಿ ಬೈಕ್ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಆರೋಪಿಯನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಯಿತು. ಆರೋಪಿಯ ಮಾಹಿತಿ ಆಧಾರವಾಗಿ ಮಾರ್ಚ್ 9ರಂದು ಬಿ.ಟಿ.ಎಂ ಲೇಔಟ್ ಕೆರೆಯ ಹಿಂಭಾಗದ ಖಾಲಿ ಜಾಗದಲ್ಲಿ ಅಡಗಿಸಿಟ್ಟಿದ್ದ 9 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಯಿತು. ಬಂಧನದ ವೇಳೆ ಸಿಕ್ಕಿದ ಒಂದು ಬೈಕ್ ಸೇರಿ ಒಟ್ಟು 10 ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಈ ಬಂಧನದಿಂದ ಬೊಮ್ಮನಹಳ್ಳಿ, ಬೇಗೂರು, ಬಂಡೇಪಾಳ್ಯ, ಹೆಬ್ಬಗೋಡಿ, ಗಿರಿನಗರ, ಪರಪ್ಪನ ಅಗ್ರಹಾರ, ಕಾಮಾಕ್ಷಿಪಾಳ್ಯ ಸೇರಿದಂತೆ ವಿವಿಧ ಠಾಣೆಗಳ 9 ಪ್ರಕರಣಗಳು ಹಾಗೂ ತಮಿಳುನಾಡಿನ ಸಿಪ್‌ಕಾಟ್ ಠಾಣೆಯ 1 ಪ್ರಕರಣ ಬಯಲಾಗಿದೆ.
ಮೈಕೋ ಲೇಔಟ್ ಉಪವಿಭಾಗದ ಎಸಿಪಿ ಶಿವಶಂಕರ ರೆಡ್ಡಿ ಅವರ ನೇತೃತ್ವದಲ್ಲಿ, ಇನ್ಸ್‌ಪೆಕ್ಟರ್ ಪ್ರೀತಮ್ ಎ.ಡಿ ಹಾಗೂ ಸಿಬ್ಬಂದಿ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಪೊಲೀಸರ ಕಾರ್ಯಕ್ಷಮತೆಗೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ : ಗಣೇಶ್ ರಿಪ್ಪನ್ ಪೇಟೆ