ಶಿವಮೊಗ್ಗ: ಹುಲಿ ಮತ್ತು ಸಿಂಹಧಾಮದಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಪಶುವೈದ್ಯೆಯೊಬ್ಬರು ನೀರಾನೆ ದಾಳಿಗೆ ಬಲಿಯಾಗಿರುವ ಘಟನೆ ಆತಂಕ ಮೂಡಿಸಿದೆ. ಬೆಂಗಳೂರು ಮೂಲದ ಡಾ. ಸಮೀಕ್ಷಾ ರೆಡ್ಡಿ (27) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ.ಡಾ. ಸಮೀಕ್ಷಾ ರೆಡ್ಡಿ ಇತ್ತೀಚೆಗೆ ಗುತ್ತಿಗೆ ಆಧಾರದಲ್ಲಿ ಪಶುವೈದ್ಯೆಯಾಗಿ ನೇಮಕಗೊಂಡಿದ್ದು, ತರಬೇತಿ ಪಡೆಯುತ್ತಿದ್ದರು. ಗುರುವಾರ ರಾತ್ರಿ ಸುಮಾರು 10.30ರ ವೇಳೆಗೆ ಮೃಗಾಲಯದ ಆಸ್ಪತ್ರೆಗೆ ಸನ್ ಕಾನರ್ ಹಕ್ಕಿಗೆ ಚಿಕಿತ್ಸೆ ನೀಡಲು ತೆರಳಿದ್ದರು. ಇದೇ ವೇಳೆ ಗರ್ಭಿಣಿ ನೀರಾನೆಯ ದೇಹದ ಉಷ್ಣತೆಯನ್ನು ಥರ್ಮಲ್ ಕ್ಯಾಮೆರಾ ಮೂಲಕ ಪರೀಕ್ಷಿಸಲು ಅದರ ಆವರಣದೊಳಗೆ ಪ್ರವೇಶಿಸಿದ್ದರು.ಆ ಸಂದರ್ಭದಲ್ಲಿ ನೀರಾನೆ ಏಕಾಏಕಿ ದಾಳಿ ನಡೆಸಿದ್ದು, ಡಾ. ಸಮೀಕ್ಷಾ ಗಂಭೀರವಾಗಿ ಗಾಯಗೊಂಡರು. ರಾತ್ರಿ ಸುಮಾರು 11.45ರ ವೇಳೆಗೆ ಈ ಘಟನೆ ಸಂಭವಿಸಿದ್ದು, ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ತುರ್ತು ಶಸ್ತ್ರಚಿಕಿತ್ಸೆಯನ್ನೂ ವೈದ್ಯರು ನಡೆಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಿಗ್ಗೆ ಸುಮಾರು 6.30ರ ವೇಳೆಗೆ ಅವರು ಕೊನೆಯುಸಿರು ಎಳೆದಿದ್ದಾರೆ.ಈ ಘಟನೆ ಮೃಗಾಲಯದಲ್ಲಿ ಸುರಕ್ಷತಾ ಕ್ರಮಗಳ ಕುರಿತು ಪ್ರಶ್ನೆಗಳನ್ನು ಎಬ್ಬಿಸಿದ್ದು, ಸಂಬಂಧಿಸಿದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ವರದಿ : ಗಣೇಶ್ ರಿಪ್ಪನ್ ಪೇಟೆ

By Anjan Kerehalli

ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ನಮ್ಮ ಧ್ವನಿ, ನಿಮ್ಮ ಹಕ್ಕು ಮಲ್ಲಾಡ್ ಸುದ್ದಿ ಎಕ್ಸ್ಪ್ರೆಸ್ ದು ಮಲೆನಾಡ ಜನರ ಧ್ವನಿ “ನಮ್ಮ ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ಜನರೊಂದಿಗೆ, ಜನರಿಗಾಗಿ.”

Leave a Reply

Your email address will not be published. Required fields are marked *