
ಶಿವಮೊಗ್ಗ: ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್‌ನ ನಿಯೋಟಿಯಾ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಏಕತಾ ಶಿಬಿರದಲ್ಲಿ ಕುವೆಂಪು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ತಂಡ ಉತ್ತಮ ಸಾಧನೆ ಮಾಡಿ ಗಮನಸೆಳೆದಿದೆ.
ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಿಸಿರುವುದು ವಿಶೇಷವಾಗಿದೆ.ಏಳು ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳೊಂದಿಗೆ ಪರಸ್ಪರ ಸಂವಾದ ನಡೆಸಿದ ತಂಡ, ರಾಷ್ಟ್ರೀಯ ಏಕತೆ ಮತ್ತು ಸೇವಾ ಮನೋಭಾವದ ಮಹತ್ವವನ್ನು ಅರಿತುಕೊಂಡಿದೆ. ಈ ಮೂಲಕ ಒಗ್ಗಟ್ಟಿನ ಸಂದೇಶವನ್ನು ಪರಿಣಾಮಕಾರಿಯಾಗಿ ಹಂಚುವಲ್ಲಿ ಯಶಸ್ವಿಯಾಗಿದೆ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೀರ್ಥಹಳ್ಳಿ ನಿರೀಕ್ಷಾ ಕೆ.ಬಿ, ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಹೇಮಂತ್ ಗೌಡ, ರುಚಿತಾ ಬಿ.ಎಸ್, ಕುಮದ್ವತಿ ಕಾಲೇಜಿನ ಚೇತನ್ ಕುಮಾರ್, ಸಹ್ಯಾದ್ರಿ ಕಾಲೇಜಿನ ಮಾರುತಿ ಎಸ್, ಶರಾವತಿ ಕಾಲೇಜಿನ ಸಾತ್ವಿಕ್ ಎಂ.ಎಸ್, ಇಂದಿರಾ ಗಾಂಧಿ ಮಹಿಳಾ ಕಾಲೇಜಿನ ಶ್ವೇತಾ, ಸರ್ಕಾರಿ ಕಾಲೇಜಿನ ಶ್ರೀಧರ ನಾಯ್ಕ, ನಿವೇದಿತಾ ಸೇರಿದಂತೆ ಹಲವು ವಿದ್ಯಾರ್ಥಿಗಳು ತಂಡದಲ್ಲಿ ಭಾಗವಹಿಸಿದ್ದರು.
ಸ್ಪರ್ಧೆಗಳ ವಿಭಾಗದಲ್ಲಿ ಭಾಷಣದಲ್ಲಿ ದ್ವಿತೀಯ ಸ್ಥಾನ, ರಂಗೋಲಿಯಲ್ಲಿ ತೃತೀಯ ಸ್ಥಾನ, ಗೀತಗಾಯನದಲ್ಲಿ ತೃತೀಯ ಸ್ಥಾನ ಹಾಗೂ ರೀಲ್ಸ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ತಂಡ ತನ್ನ ಪ್ರತಿಭೆಯನ್ನು ಸಾಬೀತುಪಡಿಸಿದೆ.“
ವಿದ್ಯಾರ್ಥಿಗಳು ಉತ್ತಮವಾಗಿ ಪ್ರದರ್ಶನ ನೀಡಿದ್ದು, ತಂಡದ ಶ್ರಮ ಮತ್ತು ಸಮನ್ವಯವೇ ಈ ಸಾಧನೆಗೆ ಕಾರಣವಾಗಿದೆ,” ಎಂದು ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ. ಪ್ರವೀಣ್ ಬಿ.ಎನ್ ತಿಳಿಸಿದ್ದಾರೆ.
ವರದಿ : ಕೆರೆಹಳ್ಳಿ ಅಂಜನ್