ಹೊಸನಗರ: ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರು ಸ್ಥಾಪಿಸುವ ಸಂಬಂಧ ನಡೆಯುತ್ತಿರುವ ಹೋರಾಟ ಇನ್ನಷ್ಟು ಬಲ ಪಡೆದುಕೊಳ್ಳಬೇಕಿದೆ ಎಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಅಭಿಪ್ರಾಯಪಟ್ಟರು.

ಗುರುವಾರ ಕ್ಷೇತ್ರ ಪುನರ್‌ರಚನಾ ಸಮಿತಿಯ ಹೊಸ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಂದು ಮನೆಯವರೂ ಸ್ವಯಂ ಪ್ರೇರಣೆಯಿಂದ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಸಮಿತಿಯ ಪದಾಧಿಕಾರಿಗಳು ಕಾರ್ಯನಿರ್ವಹಿಸಬೇಕೆಂದು ಹೇಳಿದರು.ನಗರದಿಂದ ಏಪ್ರಿಲ್ 5ರಂದು ಪಾದಯಾತ್ರೆ ಆರಂಭವಾಗಲಿದ್ದು, ಏಪ್ರಿಲ್ 6ರಂದು ರಿಪ್ಪನ್‌ಪೇಟೆಯಲ್ಲಿ ಭಾರೀ ಸಾರ್ವಜನಿಕ ಸಭೆ ನಡೆಯಲಿದೆ. ಈ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವ ಮೂಲಕ ಆಡಳಿತ ವ್ಯವಸ್ಥೆಗೆ ಜನಬಲವನ್ನು ತೋರಿಸಬೇಕಾಗಿದೆ. ಕ್ಷೇತ್ರ ಪುನರ್ ಸ್ಥಾಪನೆಗೆ ಸಂಬಂಧಿಸಿದ ನಮ್ಮ ಬೇಡಿಕೆಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿಸಬೇಕು. ಕ್ಷೇತ್ರಕ್ಕೆ ಮರು ಮಾನ್ಯತೆ ದೊರೆಯುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.ಪಾದಯಾತ್ರೆ ಹಾಗೂ ಸಭೆ ಆಯೋಜನೆಗೆ ಸುಮಾರು ನಾಲ್ಕು ಲಕ್ಷ ರೂಪಾಯಿ ವೆಚ್ಚವಾಗುವ ಸಾಧ್ಯತೆ ಇದ್ದು, ಈ ಕುರಿತು ಸಂಪೂರ್ಣ ಪಾರದರ್ಶಕವಾಗಿ ಲೆಕ್ಕಪತ್ರಗಳನ್ನು ನಿರ್ವಹಿಸಲಾಗುತ್ತದೆ ಎಂದರು.ಜಿ.ಪಂ. ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಮಾತನಾಡಿ, ಕ್ಷೇತ್ರ ಪುನರ್ ಸ್ಥಾಪನೆ ಹೋರಾಟದ ಕಾರ್ಯಚಟುವಟಿಕೆಗಳನ್ನು ಸಮನ್ವಯಗೊಳಿಸಲು ಒಂದು ತಿಂಗಳ ಅವಧಿಗೆ ಹೊಸ ಕಚೇರಿಯನ್ನು ಆರಂಭಿಸಲಾಗಿದೆ. ಇದರ ಮೂಲಕ ಮುಂದಿನ ಹೋರಾಟದ ಯೋಜನೆಗಳನ್ನು ಚರ್ಚಿಸಿ ರೂಪುರೇಷೆಗಳನ್ನು ತಯಾರಿಸಲು ಅನುಕೂಲವಾಗಲಿದೆ ಎಂದರು. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಿಂದಲೂ ಜನರು ಒಗ್ಗೂಡಿ ಹೋರಾಟಕ್ಕೆ ಬೆಂಬಲ ನೀಡಬೇಕು. ಯಾರಾದರೂ ಆಹ್ವಾನಿಸುವುದಕ್ಕಾಗಿ ಕಾಯುವ ಸಂದರ್ಭ ಇದಲ್ಲ, ಇದು ಎಲ್ಲರಿಗೂ ಸೇರಿದ ಹೋರಾಟ ಎಂದು ಅವರು ಹೇಳಿದರು.ಮಾಜಿ ಶಾಸಕ ಬಿ. ಸ್ವಾಮಿರಾವ್ ಮಾತನಾಡಿ, ತಾವು ಪ್ರತಿನಿಧಿಸಿದ್ದ ಹೊಸನಗರ ಕ್ಷೇತ್ರ ಈಗ ಅಸ್ತಿತ್ವದಲ್ಲಿಲ್ಲ ಎಂಬುದು ತುಂಬ ನೋವು ತಂದಿದೆ. ತಮ್ಮ 95ನೇ ವಯಸ್ಸಿನಲ್ಲಿಯೂ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಸಿದ್ಧನಿದ್ದೇನೆ. ಮತ್ತೊಮ್ಮೆ ಹೊಸನಗರ ವಿಧಾನಸಭಾ ಕ್ಷೇತ್ರ ರೂಪುಗೊಳ್ಳುವುದನ್ನು ನೋಡುವುದು ತಮ್ಮ ಜೀವನದ ಕೊನೆಯ ಆಸೆಯಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಎನ್.ಆರ್. ದೇವಾನಂದ, ಚಂದ್ರಮೌಳಿಗೌಡ, ಸುರೇಶ್ ಸ್ವಾಮಿರಾವ್, ವೀರೇಶ್ ಆಲವಳ್ಳಿ, ಎಚ್.ಬಿ. ಚಿದಂಬರ, ಸತೀಶ್, ಎ.ವಿ. ಮಲ್ಲಿಕಾರ್ಜುನ ಪೂರ್ಣೇಶ್, ಶಾಂತಮೂರ್ತಿ, ಬೃಂದಾವನ ಪ್ರವೀಣ್, ಸದಾಶಿವ ಶ್ರೇಷ್ಠಿ, ಎಂ.ಪಿ. ಸುರೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ವರದಿ : ವಿಠಲ್ ರಾವ್, ಹೊಸನಗರ
O