ಬಿಜೆಪಿ ಮಂಡಲದ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಸತೀಶ್ ಎನ್ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ಮಾಡಿ ಶುಭಾಶಯ ಕೋರಿದರು

ಸಂಘಟನೆ ಬಲಪಡಿಸುವ ಕುರಿತು ಮಹತ್ವದ ಸಲಹೆಗಳನ್ನು ನೀಡಿದರು.ಬಟ್ಟೆಮಲ್ಲಪ್ಪ ಗ್ರಾಮಕ್ಕೆ ಖಾಸಗಿ ಕಾರ್ಯಕ್ರಮದ ನಿಮಿತ್ತ ತೆರಳಿದ್ದ ಸಂದರ್ಭದಲ್ಲಿ ಈ ಭೇಟಿ ನಡೆದಿದ್ದು, ಮಂಡಲದ ಕಾರ್ಯಚಟುವಟಿಕೆಗಳ ಬಗ್ಗೆ ಸಮಗ್ರ ಚರ್ಚೆ ನಡೆಯಿತು. ಪಕ್ಷವನ್ನು ಗ್ರಾಮ ಮಟ್ಟದಿಂದ ಬಲಿಷ್ಠಗೊಳಿಸುವುದು ಅತ್ಯಗತ್ಯವಾಗಿದ್ದು, ವಿಶೇಷವಾಗಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಚುರುಕುಗೊಳಿಸುವತ್ತ ಹೆಚ್ಚು ಗಮನ ಹರಿಸಬೇಕೆಂದು ವಿಜಯೇಂದ್ರ ಸೂಚಿಸಿದರು.ಜನರೊಂದಿಗೆ ನೇರ ಸಂಪರ್ಕ ಸಾಧಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳು ಮತ್ತು ಸಾಧನೆಗಳನ್ನು ಮನೆಮನೆಗೂ ತಲುಪಿಸುವ ಕಾರ್ಯಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದು ಅವರು ಹೇಳಿದರು. ಸಂಘಟನೆಯ ಶಕ್ತಿಯೇ ಪಕ್ಷದ ಯಶಸ್ಸಿನ ಮೂಲವಾಗಿರುವುದರಿಂದ, ಸಮರ್ಪಿತ ತಂಡ ನಿರ್ಮಾಣದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.ಇದಕ್ಕೆ ಪ್ರತಿಕ್ರಿಯಿಸಿದ ಸತೀಶ್ ಎನ್, ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿ, ಶಿಸ್ತಿನ ಹಾಗೂ ಸಂಘಟಿತ ಕಾರ್ಯಪದ್ಧತಿಯೊಂದಿಗೆ ಮಂಡಲವನ್ನು ಬಲಪಡಿಸುವುದಾಗಿ ಭರವಸೆ ನೀಡಿದರು. ಯುವಕರು, ಮಹಿಳೆಯರು ಹಾಗೂ ಹಿರಿಯ ಕಾರ್ಯಕರ್ತರನ್ನು ಸಮನ್ವಯಗೊಳಿಸಿ ಪಕ್ಷದ ನೆಲೆಯನ್ನು ವಿಸ್ತರಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಕಗ್ಗಲಿ ಲಿಂಗಪ್ಪ, ನಾಗಾರ್ಜುನ ಸ್ವಾಮಿ ಸೇರಿದಂತೆ ಹಲವಾರು ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಮುಂದಿನ ಕಾರ್ಯಕ್ರಮಗಳು, ಸಂಘಟನೆ ವಿಸ್ತರಣೆ ಹಾಗೂ ಭವಿಷ್ಯದ ಕಾರ್ಯಯೋಜನೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಈ ಭೇಟಿಯಿಂದ ಹೊಸನಗರ ಬಿಜೆಪಿ ಘಟಕದಲ್ಲಿ ಹೊಸ ಚೈತನ್ಯ ಮೂಡಿದೆ ಎಂಬ ಮಾತು ಕೇಳಿಬಂದಿದೆ.
ವರದಿ : ಅಂಜನ್ ಕೆರೆಹಳ್ಳಿ