ನಾಲ್ಕು ರಸ್ತೆಗಳ ಬೀದಿದೀಪಗಳಿಗೆ ಸ್ವಾತಂತ್ರ್ಯ ಹೋರಾಟಗಾರರು, ರಾಜರು, ವಿಜ್ಞಾನಿಗಳು ಹಾಗೂ ಮಹನೀಯರ ಭಾವಚಿತ್ರ ಅಳವಡಿಕೆ

ರಿಪ್ಪನ್‌ಪೇಟೆ: 59 ವರ್ಷಗಳ ಇತಿಹಾಸ ಹೊಂದಿರುವ ರಿಪ್ಪನ್‌ಪೇಟೆಯ ಗಣೇಶೋತ್ಸವಕ್ಕೆ ಈ ಬಾರಿ ರಾಷ್ಟ್ರಭಕ್ತಿಯ ವಿಶೇಷ ಮೆರುಗು ದೊರೆತಿದೆ. ಗಣೇಶೋತ್ಸವದ ಅಂಗವಾಗಿ ಹಿಂದೂ ಜಾಗರಣ ವೇದಿಕೆಯ ವತಿಯಿಂದ ಪಟ್ಟಣದ ನಾಲ್ಕು ಪ್ರಮುಖ ರಸ್ತೆಗಳ ಬೀದಿದೀಪದ ಕಂಬಗಳಿಗೆ ದೇಶಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರು, ಹುತಾತ್ಮರು, ರಾಜರು, ಸಮಾಜ ಸುಧಾರಕರು, ವಿಜ್ಞಾನಿಗಳು ಹಾಗೂ ರಾಷ್ಟ್ರಕ್ಕೆ ಅಪಾರ ಕೊಡುಗೆ ನೀಡಿದ ಮಹನೀಯರ ಭಾವಚಿತ್ರಗಳನ್ನು ಅಳವಡಿಸುವ ಮೂಲಕ ವಿಭಿನ್ನ ರೀತಿಯ ಸಂದೇಶ ಸಾರಲಾಗಿದೆ.

ಗಣೇಶೋತ್ಸವದ ಸಡಗರದ ನಡುವೆ ಕೇವಲ ಅಲಂಕಾರಕ್ಕೆ ಸೀಮಿತವಾಗದೆ, ದೇಶದ ಇತಿಹಾಸವನ್ನು ಯುವಜನತೆ ಹಾಗೂ ಸಾರ್ವಜನಿಕರಿಗೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯ ಕೈಗೊಳ್ಳಲಾಗಿದೆ.

ಬೀದಿದೀಪದ ಕಂಬಗಳಲ್ಲಿ ಅಳವಡಿಸಿರುವ ಭಾವಚಿತ್ರಗಳು ಸಾರ್ವಜನಿಕರ ಗಮನ ಸೆಳೆಯುತ್ತಿದ್ದು, ಪ್ರತಿಯೊಬ್ಬ ಮಹನೀಯರ ಜೀವನ, ಹೋರಾಟ ಮತ್ತು ದೇಶಕ್ಕೆ ನೀಡಿದ ಕೊಡುಗೆಯನ್ನು ನೆನಪಿಸುವಂತಿವೆ.

ಬೀದಿದೀಪದ ಕಂಬಗಳಲ್ಲಿ ಅಳವಡಿಸಿರುವ ಭಾವಚಿತ್ರಗಳು ಸಾರ್ವಜನಿಕರ ಗಮನ ಸೆಳೆಯುತ್ತಿದ್ದು, ಪ್ರತಿಯೊಬ್ಬ ಮಹನೀಯರ ಜೀವನ, ಹೋರಾಟ ಮತ್ತು ದೇಶಕ್ಕೆ ನೀಡಿದ ಕೊಡುಗೆಯನ್ನು ನೆನಪಿಸುವಂತಿವೆ.ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ರಾಜಗುರು, ಸುಖದೇವ್, ಚಂದ್ರಶೇಖರ್ ಆಜಾದ್, ಸುಭಾಷ್ ಚಂದ್ರ ಬೋಸ್, ಮದನ್‌ಲಾಲ್ ಧಿಂಗ್ರಾ, ಖುದೀರಾಮ್ ಬೋಸ್, ಸೂರ್ಯಸೇನ್, ರಾಮಪ್ರಸಾದ್ ಬಿಸ್ಮಿಲ್, ಲಾಲಾ ಲಜಪತ್ ರಾಯ್, ಬಾಲ ಗಂಗಾಧರ ತಿಲಕ್, ಬಿಪಿನ್ ಚಂದ್ರ ಪಾಲ್, ವೀರ ಸಾವರ್ಕರ್, ರಾಣಿ ಲಕ್ಷ್ಮೀಬಾಯಿ ಸೇರಿದಂತೆ ಹಲವಾರು ಹೋರಾಟಗಾರರ ಭಾವಚಿತ್ರಗಳನ್ನು ಅಳವಡಿಸಲಾಗಿದೆ.

ಅದರಲ್ಲೂ ಇತಿಹಾಸದ ಪುಟಗಳಲ್ಲಿ ಹೆಚ್ಚು ಚರ್ಚೆಗೆ ಬಾರದ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನೂ ಹುಡುಕಿ ಅವರ ಭಾವಚಿತ್ರಗಳನ್ನು ಅಳವಡಿಸಿರುವುದು ಈ ಕಾರ್ಯದ ವಿಶೇಷತೆಯಾಗಿದೆ.

ದೇಶದ ವಿವಿಧ ಕ್ಷೇತ್ರಗಳಿಗೆ ಕೊಡುಗೆ ನೀಡಿದ ಮಹನೀಯರಿಗೂ ಇಲ್ಲಿ ಸ್ಥಾನ ನೀಡಲಾಗಿದೆ. ಡಾ. ಬಿ.ಆರ್. ಅಂಬೇಡ್ಕರ್, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ, ಸ್ವಾಮಿ ವಿವೇಕಾನಂದ, ಮೊಟ್ಟಮೊದಲ ಬಾರಿಗೆ ಅಖಂಡ ಭಾರತ ಸಂಕಲ್ಪದ ಕನಸನ್ನ ಕಂಡ ಆಚಾರ್ಯ ಚಾಣಕ್ಯ, ಆರ್ಯಭಟ್ಟ, ಚರಕ, ಶ್ರೀನಿವಾಸ ರಾಮಾನುಜನ್ ಸೇರಿದಂತೆ ಜ್ಞಾನ, ವಿಜ್ಞಾನ, ಸಮಾಜ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿದ ಮಹನೀಯರ ಭಾವಚಿತ್ರಗಳು ಜನರ ಗಮನ ಸೆಳೆಯುತ್ತಿವೆ.

ಇನ್ನು ದೇಶದ ಇತಿಹಾಸದಲ್ಲಿ ತಮ್ಮದೇ ಛಾಪು ಮೂಡಿಸಿದ ಕೆಳದಿ ರಾಣಿ ಚೆನ್ನಮ್ಮ, ಶಿವಪ್ಪ ನಾಯಕ, ನಾಡಪ್ರಭು ಕೆಂಪೇಗೌಡ, ಛತ್ರಪತಿ ಶಿವಾಜಿ ಮಹಾರಾಜ್, ಮಹಾರಾಣಾ ಪ್ರತಾಪ್, ವೀರ ಮದಕರಿ ನಾಯಕ, ಶ್ರೀಕೃಷ್ಣದೇವರಾಯ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಹಲವು ರಾಜರು ಹಾಗೂ ವೀರರ ಚಿತ್ರಗಳನ್ನೂ ಅಳವಡಿಸಲಾಗಿದೆ.

ಅದೇ ರೀತಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರಾದ ಮೇಜರ್ ವಿಕ್ರಮ್ ಬಾತ್ರಾ ಹಾಗೂ ಮೇಜರ್ ಮನೋಜ್ ಕುಮಾರ್ ಪಾಂಡೆ ಅವರ ಭಾವಚಿತ್ರಗಳ ಮೂಲಕ ಭಾರತೀಯ ಸೈನಿಕರ ತ್ಯಾಗ ಮತ್ತು ದೇಶಭಕ್ತಿಯ ಸಂದೇಶವನ್ನು ಸಾರಲಾಗಿದೆ.

ಒಟ್ಟಾರೆ, ಗಣೇಶೋತ್ಸವದ ಸಂಭ್ರಮದ ನಡುವೆ ರಿಪ್ಪನ್‌ಪೇಟೆಯ ನಾಲ್ಕು ಪ್ರಮುಖ ರಸ್ತೆಗಳು ಕೇಸರಿ ಅಲಂಕಾರದಿಂದ ಕಂಗೊಳಿಸುವುದರ ಜೊತೆಗೆ, ಬೀದಿದೀಪದ ಕಂಬಗಳಲ್ಲಿ ರಾರಾಜಿಸುತ್ತಿರುವ ಮಹನೀಯರ ಭಾವಚಿತ್ರಗಳು ಪಟ್ಟಣಕ್ಕೆ ವಿಭಿನ್ನ ಮೆರುಗು ನೀಡಿವೆ.

ಗಣೇಶೋತ್ಸವದ ಅಲಂಕಾರಕ್ಕೆ ಇತಿಹಾಸದ ಸ್ಪರ್ಶ ನೀಡುವ ಮೂಲಕ, ಮಹನೀಯರ ಹೋರಾಟ ಮತ್ತು ಕೊಡುಗೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನವನ್ನು ಹಿಂದೂ ಜಾಗರಣ ವೇದಿಕೆ ಕೈಗೊಂಡಿದೆ