ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್ ರೈಲು ಮಾರ್ಗ ಮಧ್ಯೆ ನಿಲುಗಡೆ – ಪ್ರಯಾಣಿಕರು ಪರದಾಟ

ಅರಸಾಳು: ರೈಲು ಹಳಿಯ ಸಮೀಪ ಮರ ಬಿದ್ದ ಪರಿಣಾಮ ರೈಲು ಸಂಚಾರಕ್ಕೆ ಅಡ್ಡಿಯಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯೆಯೇ ನಿಲುಗಡೆ ಮಾಡಲಾಗಿದೆ.

ಅರಸಾಳು ಸಮೀಪದ ರೈಲು ಮಾರ್ಗದಲ್ಲಿ ಮರ ಬಿದ್ದಿರುವುದು ರೈಲ್ವೆ ಸಿಬ್ಬಂದಿಯ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ಯಾವುದೇ ಅನಾಹುತ ಸಂಭವಿಸದಂತೆ ರೈಲನ್ನು ತಕ್ಷಣವೇ ನಿಲ್ಲಿಸಲಾಗಿದೆ. ತಾಳಗುಪ್ಪ ಕಡೆಯಿಂದ ಮೈಸೂರು ಕಡೆಗೆ ಸಂಚರಿಸುತ್ತಿದ್ದ ಎಕ್ಸ್‌ಪ್ರೆಸ್ ರೈಲು ಆನೇಕೆರೆ–ನೆವಟೂರು ಮಧ್ಯಭಾಗದಲ್ಲಿ ನಿಲುಗಡೆಯಾಗಿದೆ ಎಂದು ತಿಳಿದುಬಂದಿದೆ.

ಮರ ಬಿದ್ದಿರುವುದರಿಂದ ರೈಲು ಹಳಿಯಲ್ಲಿ ಸಂಚಾರಕ್ಕೆ ತಾತ್ಕಾಲಿಕವಾಗಿ ತೊಂದರೆ ಉಂಟಾಗಿದ್ದು, ರೈಲ್ವೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮರ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಮರ ತೆರವುಗೊಳಿಸಿದ ಬಳಿಕ ಹಳಿಯ ಸುರಕ್ಷತೆಯನ್ನು ಪರಿಶೀಲಿಸಿ ರೈಲು ಸಂಚಾರವನ್ನು ಪುನರಾರಂಭಿಸುವ ನಿರೀಕ್ಷೆಯಿದೆ.

ಈ ರೈಲು ಬೆಳಗ್ಗೆ ಸುಮಾರು 5 ಗಂಟೆಗೆ ಹೊರಟು, ಮಧ್ಯಾಹ್ನ ಸುಮಾರು 12 ಗಂಟೆ ವೇಳೆಗೆ ಬೆಂಗಳೂರನ್ನು ತಲುಪುವ ನಿರೀಕ್ಷೆಯಿತ್ತು. ಆದರೆ ಅರಸಾಳು ಸಮೀಪ ಮರ ಬಿದ್ದ ಪರಿಣಾಮ ರೈಲು ಮಾರ್ಗ ಮಧ್ಯೆಯೇ ನಿಂತಿರುವುದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ.

ರೈಲು ದೀರ್ಘಕಾಲ ನಿಲುಗಡೆಯಾಗಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಆಹಾರ ಮತ್ತು ಉಪಹಾರದ ಸಮಸ್ಯೆಯೂ ಎದುರಾಗಿದೆ. ಬೆಳಗ್ಗೆಯಿಂದಲೇ ಪ್ರಯಾಣದಲ್ಲಿದ್ದ ಕೆಲ ಪ್ರಯಾಣಿಕರು ಹಸಿವಿನಿಂದ ಪರದಾಡುವಂತಾಗಿದೆ. ರೈಲು ಯಾವಾಗ ಮತ್ತೆ ಸಂಚಾರ ಆರಂಭಿಸಲಿದೆ ಎಂಬುದು ಸ್ಪಷ್ಟವಾಗದೆ ಪ್ರಯಾಣಿಕರು ಆತಂಕ ಹಾಗೂ ಗೊಂದಲಕ್ಕೆ ಒಳಗಾಗಿದ್ದಾರೆ.

ರೈಲ್ವೆ ಸಿಬ್ಬಂದಿ ಮರ ತೆರವು ಕಾರ್ಯದಲ್ಲಿ ತೊಡಗಿದ್ದು, ಹಳಿಯ ಪರಿಶೀಲನೆ ಹಾಗೂ ಸುರಕ್ಷತಾ ಕ್ರಮಗಳು ಪೂರ್ಣಗೊಂಡ ನಂತರ ರೈಲು ತನ್ನ ಪ್ರಯಾಣವನ್ನು ಮುಂದುವರಿಸುವ ಸಾಧ್ಯತೆ ಇದೆ.