
ರಿಪ್ಪನ್ಪೇಟೆಯಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ: 21 ಕೆ.ಜಿ. ಜಿಂಕೆ ಮಾಂಸ, ಎರ್ಟಿಗಾ ಕಾರು ವಶ
ರಿಪ್ಪನ್‌ಪೇಟೆ: ಮಾರಾಟದ ಉದ್ದೇಶದಿಂದ ಜಿಂಕೆ ಮಾಂಸವನ್ನು ಕಾರಿನಲ್ಲಿ ಸಂಗ್ರಹಿಸಿಟ್ಟಿದ್ದ ಆರೋಪದ ಮೇಲೆ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಸುಮಾರು 21 ಕೆ.ಜಿ. ಜಿಂಕೆ ಮಾಂಸ ಹಾಗೂ ಮಾರುತಿ ಎರ್ಟಿಗಾ ಕಾರನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ರಿಪ್ಪನಪೇಟೆ ಶಬರೀಶನಗರ ಪ್ರದೇಶದಲ್ಲಿ ಅರಣ್ಯ ಸಂಚಾರಿ ದಳದ ಪಿಎಸ್‌ಐ ವಿನಾಯಕ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾರುತಿ ಎರ್ಟಿಗಾ ಕಾರಿನಲ್ಲಿ ಸಂಗ್ರಹಿಸಿಟ್ಟಿದ್ದ ಜಿಂಕೆ ಮಾಂಸ ಪತ್ತೆಯಾಗಿದ್ದು, ಅಧಿಕಾರಿಗಳು ಮಾಂಸ ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಶಬರೀಶ ನಗರ ನಿವಾಸಿ ಗುರುರಾಜ್, ಕಾರಗೋಡು ನಿವಾಸಿ ಹೊಸನಗರ ತಾಲೂಕು ಮಾಹಿತಿ ಹಕ್ಕು ಆಯೋಗದ ಅಧ್ಯಕ್ಷ ಎಂದು ಗುರುತಿಸಲ್ಪಟ್ಟಿರುವ (ಕಲಾವಿದ )ಗಣೇಶ್ ಕೆ.ಜಿ. ಸೇರಿದಂತೆ ಕೆಲವರು ದಾಳಿ ನಡೆಯುತ್ತಿದ್ದ ಸಂದರ್ಭದಲ್ಲಿ ಸ್ಥಳದಿಂದ ತಪ್ಪಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಜಿಂಕೆ ಸೇರಿದಂತೆ ವನ್ಯಜೀವಿಗಳ ಬೇಟೆ ಮತ್ತು ಮಾಂಸ ಸಾಗಾಟ ಗಂಭೀರ ಅಪರಾಧವಾಗಿದ್ದು, ಈ ಸಂಬಂಧ ಅರಣ್ಯ ಇಲಾಖೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದೆ. ಪರಾರಿಯಾಗಿರುವ ಆರೋಪಿಗಳ ಪತ್ತೆಗಾಗಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.ಕಾರ್ಯಾಚರಣೆಯಲ್ಲಿ ಅರಣ್ಯ ಸಂಚಾರಿ ದಳದ ಗಣೇಶ್ ಬಿ.ಸಿ., ಆಂಜನೇಯ ಪಾಟೀಲ್, ಚಂದ್ರಕಾಂತ್, ಸುರೇಶ್, ಪ್ರಮೋದಿನಿ ಹಾಗೂ ಹೆಚ್.ಬಿ. ದೊಡ್ಡಮನಿ ಭಾಗವಹಿಸಿದ್ದರು.
ಪ್ರಕರಣದ ತನಿಖೆ ಮುಂದುವರಿದಿದ್ದು, ಜಿಂಕೆ ಮಾಂಸ ಎಲ್ಲಿಂದ ತರಲಾಗಿತ್ತು, ಇದರ ಹಿಂದೆ ಇನ್ನಷ್ಟು ಮಂದಿ ಇದ್ದಾರೆಯೇ ಎಂಬ ಬಗ್ಗೆಯೂ ಅರಣ್ಯ ಇಲಾಖೆ ಮಾಹಿತಿ ಕಲೆಹಾಕುತ್ತಿದೆ.
