
ನಾಲ್ಕೂವರೆ ದಶಕಗಳ ನಿಷ್ಪಕ್ಷಪಾತ ಪತ್ರಿಕೋದ್ಯಮಕ್ಕೆ ಅಭಿನಂದನೆ; ಸತ್ಯ ಮತ್ತು ಜವಾಬ್ದಾರಿಯುತ ಸುದ್ದಿಯೇ ಪತ್ರಕರ್ತನ ಗುರುತು: ಶಿವಾನಂದ ತಗಡೂರು

ಕೊಪ್ಪ: ಸಮಾಜಮುಖಿ ಹಾಗೂ ಸತ್ಯಾಧಾರಿತ ಪತ್ರಿಕೋದ್ಯಮದ ಮೂಲಕ ನಾಲ್ಕೂವರೆ ದಶಕಗಳಿಗೂ ಹೆಚ್ಚು ಕಾಲ ಜನರ ವಿಶ್ವಾಸ ಗಳಿಸಿರುವ ಹಿರಿಯ ಪತ್ರಕರ್ತ ಹಾಗೂ ತುಂಗಾವಾರ್ತೆ ವಾರಪತ್ರಿಕೆಯ ಸಂಪಾದಕ ಡಿ.ಎಸ್. ವಿಶ್ವನಾಥ್ ಶೆಟ್ಟಿ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೊಪ್ಪ ತಾಲ್ಲೂಕು ಘಟಕದಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಪಟ್ಟಣದ ಸಭಾಂಗಣದಲ್ಲಿ ನಡೆದ ಪತ್ರಿಕಾ ದಿನಾಚರಣೆ ಮತ್ತು ಜನನಾಯಕ ದಿವಂಗತ ಹೆಚ್.ಜಿ. ಗೋವಿಂದಗೌಡ ಅವರ ಶತಮಾನೋತ್ಸವ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನಾ ಪತ್ರ, ಸ್ಮರಣಿಕೆ ಹಾಗೂ ಗೌರವ ವಸ್ತುಗಳನ್ನು ನೀಡಿ ಅವರನ್ನು ಸತ್ಕರಿಸಲಾಯಿತು.
ಅಭಿನಂದನಾ ಪತ್ರದಲ್ಲಿ ಡಿ.ಎಸ್. ವಿಶ್ವನಾಥ್ ಶೆಟ್ಟಿ ಅವರ ವೃತ್ತಿಜೀವನದ ಸಾಧನೆಗಳನ್ನು ಸ್ಮರಿಸಲಾಯಿತು. 1959ರ ಡಿಸೆಂಬರ್ 14ರಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಕುಂಬಾರಕೊಪ್ಪ ಗ್ರಾಮದ ದೋನ್ಸೆಯಲ್ಲಿ ಜನಿಸಿದ ಅವರು, ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ ಬಿ.ಎಸ್‌ಸಿ. ಪದವಿ ಪಡೆದು, 1981ರಲ್ಲಿ ತುಂಗಾವಾರ್ತೆ ವಾರಪತ್ರಿಕೆಯನ್ನು ಆರಂಭಿಸಿದರು. ಅಂದಿನಿಂದ ಇಂದಿನವರೆಗೆ ಯಾವುದೇ ಒತ್ತಡಗಳಿಗೆ ಮಣಿಯದೆ ಜನಪರ ಹಾಗೂ ನಿಷ್ಪಕ್ಷಪಾತ ಪತ್ರಿಕೋದ್ಯಮ ನಡೆಸಿ ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ಮತ್ತು ತೀರ್ಥಹಳ್ಳಿ ಭಾಗದ ಜನರ ಮೆಚ್ಚುಗೆ ಹಾಗೂ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂದು ಪ್ರಶಂಸಿಸಲಾಯಿತು.
ಪತ್ರಿಕೋದ್ಯಮದ ಜೊತೆಗೆ ಸಾರ್ವಜನಿಕ ಸೇವೆಯಲ್ಲಿಯೂ ಅವರು ವಿಶಿಷ್ಟ ಕೊಡುಗೆ ನೀಡಿದ್ದಾರೆ. ಆರು ಬಾರಿ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿರುವ ಅವರು ಹರಿಹರಪುರ ಮಂಡಲ ಪಂಚಾಯಿತಿ ಉಪಪ್ರಧಾನ, ಹಿರೇಕೊಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ, ತಾಲ್ಲೂಕು ಭೂ ನ್ಯಾಯ ಮಂಡಳಿ ಸದಸ್ಯ, ಜಲಾನಯನ ಸಮಿತಿ ಅಧ್ಯಕ್ಷ, ತೀರ್ಥಹಳ್ಳಿ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ, ಪುರಸಭೆ ಸದಸ್ಯ, ಪಿ.ಸಿ.ಎ.ಆರ್.ಡಿ. ಬ್ಯಾಂಕ್ ನಿರ್ದೇಶಕ ಸೇರಿದಂತೆ ಹಲವು ಸಾಮಾಜಿಕ ಹಾಗೂ ಧಾರ್ಮಿಕ ಸಂಘಟನೆಗಳಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿರುವುದನ್ನು ಅಭಿನಂದನಾ ಪತ್ರದಲ್ಲಿ ಉಲ್ಲೇಖಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪತ್ರಕರ್ತರು ಸತ್ಯ, ನೈತಿಕತೆ ಮತ್ತು ಜವಾಬ್ದಾರಿಯನ್ನು ಎಂದಿಗೂ ಕೈಬಿಡಬಾರದು. ಯಾವುದೇ ಸುದ್ದಿಯನ್ನು ಪ್ರಕಟಿಸುವ ಮುನ್ನ ಅದರ ಸತ್ಯಾಸತ್ಯತೆ ಪರಿಶೀಲಿಸುವುದು ಪ್ರತಿಯೊಬ್ಬ ಪತ್ರಕರ್ತನ ಮೂಲ ಕರ್ತವ್ಯವಾಗಿದ್ದು, ಸಂಚಲನ ಸೃಷ್ಟಿಸುವ ಉದ್ದೇಶದಿಂದ ಸುಳ್ಳು ಅಥವಾ ಅಪೂರ್ಣ ಮಾಹಿತಿಯನ್ನು ಪ್ರಸಾರ ಮಾಡುವುದು ಸಮಾಜಕ್ಕೆ ಹಾನಿಕಾರಕ ಎಂದು ಹೇಳಿದರು.
ರಾಜ್ಯ ಉಪಾಧ್ಯಕ್ಷ ಹೆಚ್.ಬಿ. ಮದನ್ ಗೌಡ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹಾಗೂ ಪರಿಶೀಲಿಸದ ಸುದ್ದಿಗಳ ಹರಡುವಿಕೆ ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ದೃಢೀಕರಿಸಿದ ಮಾಹಿತಿಯನ್ನು ಮಾತ್ರ ಸಾರ್ವಜನಿಕರಿಗೆ ತಲುಪಿಸುವ ಹೊಣೆ ಪತ್ರಕರ್ತರ ಮೇಲಿದೆ ಎಂದರು. ಪತ್ರಕರ್ತರ ಕಲ್ಯಾಣಕ್ಕಾಗಿ ನಿವೃತ್ತಿ ವೇತನ, ಆರೋಗ್ಯ ವಿಮೆ, ಬಸ್ ಪಾಸ್ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತರಲು ಸಂಘ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.
ಕೊಪ್ಪ ಕಾರ್ಯನಿರತ ಪತ್ರಕರ್ತರ ಸಂಘದ ಕಾನೂನು ಸಲಹೆಗಾರ ಸುಧೀರ್ ಕುಮಾರ್ ಮುರೊಳ್ಳಿ, ದಿವಂಗತ ಹೆಚ್.ಜಿ. ಗೋವಿಂದಗೌಡ ಅವರ ಜನಪರ ರಾಜಕೀಯ ಮತ್ತು ಮೌಲ್ಯಾಧಾರಿತ ಜೀವನ ಇಂದಿನ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ಅರವಿಂದ ಚೊಕ್ಕಾಡಿ ಮಾತನಾಡಿ, ಟಿಆರ್‌ಪಿ ಮತ್ತು ವೀಕ್ಷಕರ ಸಂಖ್ಯೆಯ ಸ್ಪರ್ಧೆಯಲ್ಲಿ ಪತ್ರಿಕೋದ್ಯಮದ ಮೌಲ್ಯಗಳು ಕುಗ್ಗಬಾರದು. ನಿಖರ, ಪರಿಶೀಲಿತ ಮತ್ತು ವಿಶ್ವಾಸಾರ್ಹ ಸುದ್ದಿಗಳೇ ಪತ್ರಿಕೋದ್ಯಮದ ನಿಜವಾದ ಶಕ್ತಿ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ್ ಅನಿಲ್, ಕೊಪ್ಪ ತಾಲ್ಲೂಕು ಅಧ್ಯಕ್ಷ ಜಿನೇಶ್ ಇರ್ವತ್ತೂರು, ಸಂಘದ ಪದಾಧಿಕಾರಿಗಳು, ಪತ್ರಕರ್ತರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.
