
ಶಿವಮೊಗ್ಗ, ಜುಲೈ 30: ಉಡುಪಿ ಜಿಲ್ಲೆಯಲ್ಲಿ ನಡೆದಿರುವ ದನ ಕಳ್ಳತನ ಪ್ರಕರಣದ ತನಿಖೆ ವೇಳೆ ಪೊಲೀಸರ ಸಿನಿಮೀಯ ಬೆನ್ನಟ್ಟುವಿಕೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಬೆನವಳ್ಳಿವರೆಗೆ ತಲುಪಿದೆ. ಪೊಲೀಸರ ಬಿಗಿ ಕಾರ್ಯಾಚರಣೆಯಿಂದ ಸಿಕ್ಕಿಬೀಳುವ ಭೀತಿಗೆ ಒಳಗಾದ ಶಂಕಿತ ಆರೋಪಿಗಳು ತಮ್ಮ ಕಾರನ್ನು ಮಧ್ಯದಲ್ಲೇ ಬಿಟ್ಟು ಕಾಡಿನೊಳಗೆ ಪರಾರಿಯಾಗಿರುವ ಘಟನೆ ನಡೆದಿದೆ.
ಲಭ್ಯವಾದ ಮಾಹಿತಿಯಂತೆ, ದನಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ವಿಶ್ವಾಸಾರ್ಹ ಮಾಹಿತಿ ಉಡುಪಿ ಜಿಲ್ಲಾ ಪೊಲೀಸರಿಗೆ ದೊರೆತಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಅನುಮಾನಾಸ್ಪದ ವಾಹನವನ್ನು ತಡೆದು ಪರಿಶೀಲಿಸಲು ಮುಂದಾದಾಗ, ಚಾಲಕ ವಾಹನ ನಿಲ್ಲಿಸದೆ ವೇಗವಾಗಿ ಪರಾರಿಯಾಗಿದ್ದಾನೆ. ಇದರಿಂದ ಪೊಲೀಸರು ನಿರಂತರವಾಗಿ ವಾಹನವನ್ನು ಬೆನ್ನಟ್ಟಿದ್ದು, ಕಾರ್ಯಾಚರಣೆ ಆಗುಂಬೆ ಮಾರ್ಗವಾಗಿ ರಿಪ್ಪನ್‌ಪೇಟೆ ವ್ಯಾಪ್ತಿಯ ಬೆನವಳ್ಳಿವರೆಗೆ ಮುಂದುವರಿದಿದೆ.
ಪೊಲೀಸರ ಬೆನ್ನಟ್ಟುವಿಕೆ ಮತ್ತಷ್ಟು ತೀವ್ರವಾಗುತ್ತಿದ್ದಂತೆ, ವಾಹನದಲ್ಲಿದ್ದ ನಾಲ್ವರು ಆರೋಪಿಗಳು ಕಾರನ್ನು ಬೆನವಳ್ಳಿ ಸಮೀಪ ಬಿಟ್ಟು ದಟ್ಟ ಕಾಡಿನೊಳಗೆ ಓಡಿ ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಬಳಿಕ ಆಗುಂಬೆ ಹಾಗೂ ರಿಪ್ಪನ್‌ಪೇಟೆ ಠಾಣೆಗಳ ಪೊಲೀಸರು ಜಂಟಿಯಾಗಿ ಕಾಡು ಪ್ರದೇಶದಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಆರೋಪಿಗಳು ಬಿಟ್ಟುಹೋದ ಕಾರನ್ನು ವಶಕ್ಕೆ ಪಡೆದಿರುವ ಪೊಲೀಸರು, ಪ್ರಕರಣದ ಎಲ್ಲ ಆಯಾಮಗಳಲ್ಲೂ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಇನ್ನೂ ಮುಂದುವರಿದಿದ್ದು, ಬಂಧನದ ನಂತರ ಪ್ರಕರಣದ ಹಿಂದೆ ಇರುವ ಜಾಲ ಹಾಗೂ ಇತರೆ ಮಾಹಿತಿಗಳು ಬಹಿರಂಗವಾಗುವ ಸಾಧ್ಯತೆ ಇದೆ. ಈ ನಡುವೆ, ಅನುಮಾನಾಸ್ಪದ ವ್ಯಕ್ತಿಗಳ ಓಡಾಟ ಕಂಡುಬಂದರೆ ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ.
