ಹೊಸನಗರ : ವಾಮಾಚಾರದ ಹೆಸರಿನಲ್ಲಿ ಭಯದ ವಾತಾವರಣ ಸೃಷ್ಟಿಸುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ವರದಿಯಾಗುತ್ತಿದ್ದು, ಇದೀಗ ಹೊಸನಗರ ತಾಲೂಕಿನ ಹುಂಚ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನೆಬೈಲು ಗ್ರಾಮದ ವಾಟೆಕೂಡ್ಲು ಪ್ರದೇಶದಲ್ಲಿ ಇಂತಹ ಘಟನೆ ಬೆಳಕಿಗೆ ಬಂದಿದೆ.

ಗ್ರಾಮದ ಶ್ರೀ ಶೇಖರಪ್ಪ ಬಿನ್ ಶಂಕ್ರಪ್ಪ ಹಾಗೂ ಶ್ರೀ ಶೇಖರ ಶೆಟ್ಟಿ ಬಿನ್ ಗಣಪಯ್ಯ ಶೆಟ್ಟಿ ಅವರ ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಪಕ್ಕದಲ್ಲಿ ಘೋರವಾದ ವಾಮಾಚಾರದ ಕೃತ್ಯ ನಡೆದಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಗ್ರಾಮಸ್ಥರ ಮಾಹಿತಿ ಪ್ರಕಾರ, 2026ರ ಜುಲೈ 15ರಂದು ಅದೇ ರಸ್ತೆಯಲ್ಲಿ ಕೂಲಿ ಕೆಲಸಕ್ಕೆ ತೆರಳಿ ಹಿಂದಿರುಗುತ್ತಿದ್ದ ಮಹಿಳೆಯೊಬ್ಬರು ಈ ದೃಶ್ಯವನ್ನು ಕಂಡು ಭಯಗೊಂಡು ಅಸ್ವಸ್ಥರಾಗಿದ್ದಾರೆ. ಇದೇ ರಸ್ತೆಯಲ್ಲಿ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ಪ್ರತಿದಿನ ಸಂಚರಿಸುವುದರಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಘಟನೆ ನಡೆದ ನಂತರ ಹಲವು ದಿನಗಳು ಕಳೆದಿದ್ದರೂ, ಆ ಮಾರ್ಗದಲ್ಲಿ ಓಡಾಡಲು ಗ್ರಾಮಸ್ಥರು ಹಿಂಜರಿಯುತ್ತಿದ್ದಾರೆ. ಪರಿಣಾಮವಾಗಿ ರಸ್ತೆಯ ಬಳಿಯ ಪ್ರದೇಶವು ನಿರ್ಜನವಾಗುವ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ವಾಮಾಚಾರದ ಕೃತ್ಯ ಎಸಗಿದವರನ್ನು ಪತ್ತೆಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸಾರ್ವಜನಿಕರಲ್ಲಿ ಧೈರ್ಯ ತುಂಬುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಾಟೆಕೂಡ್ಲು ಗ್ರಾಮಸ್ಥರು ಹೊಸನಗರ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.

ಸೂಚನೆ: ಈ ವರದಿ ಗ್ರಾಮಸ್ಥರು ನೀಡಿರುವ ದೂರು ಮತ್ತು ಹೇಳಿಕೆಗಳ ಆಧಾರಿತವಾಗಿದೆ. ಈ ಕೃತ್ಯದ ಉದ್ದೇಶ ಅಥವಾ ಸ್ವರೂಪದ ಕುರಿತು ಪೊಲೀಸ್ ತನಿಖೆಯ ನಂತರವೇ ಅಧಿಕೃತ ಮಾಹಿತಿ ಸ್ಪಷ್ಟವಾಗಲಿದೆ.