ತೀರ್ಥಹಳ್ಳಿ, ಜು. 23: ಮಂಡಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕಾರ್ಯವೈಖರಿ ಕುರಿತು ಸಾರ್ವಜನಿಕರಿಂದ ನಿರಂತರವಾಗಿ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಜಯ ಕರ್ನಾಟಕ ಸಂಘಟನೆಯ ತೀರ್ಥಹಳ್ಳಿ ತಾಲೂಕು ಅಧ್ಯಕ್ಷ ಕುರುವಳ್ಳಿ ನಾಗರಾಜ್ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಡಿಎಚ್‌ಒ) ಅವರಿಗೆ ಎಚ್ಚರಿಕೆ ನೀಡಿ, ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಂಡುಹಿಡಿಯದಿದ್ದರೆ ಸಂಘಟನೆಯ ವತಿಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪತ್ರಿಕಾ ಹೇಳಿಕೆ ನೀಡಿದ್ದರು.

ಈ ಎಚ್ಚರಿಕೆಗೆ ತಕ್ಷಣ ಸ್ಪಂದಿಸಿದ ಜಿಲ್ಲಾ ಡಿಎಚ್‌ಒ ಡಾ. ನಟರಾಜ್ ಅವರು ಮಂಡಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ವೈದ್ಯರು, ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಆರೋಗ್ಯ ಕೇಂದ್ರದಲ್ಲಿ ಕಂಡುಬಂದಿರುವ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಿ, ಅಗತ್ಯ ಮೂಲಸೌಕರ್ಯ ಹಾಗೂ ಸೌಲಭ್ಯಗಳನ್ನು ಶೀಘ್ರದಲ್ಲೇ ಒದಗಿಸಲಾಗುವುದು ಎಂದು ಡಿಎಚ್‌ಒ ಭರವಸೆ ನೀಡಿದರು.

ಜಯ ಕರ್ನಾಟಕ ಸಂಘಟನೆಯು ಗ್ರಾಮೀಣ ಜನರ ಆರೋಗ್ಯ ಹಕ್ಕುಗಳ ರಕ್ಷಣೆಗೆ ಸದಾ ಬದ್ಧವಾಗಿದ್ದು, ಸಂಘಟನೆಯ ಜನಪರ ಕಾಳಜಿಗೆ ಆರೋಗ್ಯ ಇಲಾಖೆಯಿಂದ ದೊರೆತಿರುವ ಈ ತ್ವರಿತ ಸ್ಪಂದನೆ ಸ್ವಾಗತಾರ್ಹ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ.

ಈ ಕುರಿತು ಪ್ರತಿಕ್ರಿಯಿಸಿದ ತಾಲೂಕು ಅಧ್ಯಕ್ಷ ಕುರುವಳ್ಳಿ ನಾಗರಾಜ್, “ಹಳ್ಳಿಗಾಡಿನ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರೆಯಬೇಕು ಎಂಬ ಉದ್ದೇಶದಿಂದ ನೀಡಿದ ಪತ್ರಿಕಾ ಹೇಳಿಕೆಗೆ ಫಲ ದೊರೆತಿದೆ. ಜನರ ಸಮಸ್ಯೆಗೆ ಕೂಡಲೇ ಸ್ಪಂದಿಸಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಜಿಲ್ಲಾ ಡಿಎಚ್‌ಒ ಡಾ. ನಟರಾಜ್ ಅವರ ಕಾರ್ಯಕ್ಷಮತೆ ಹಾಗೂ ಜನಪರ ಕಾಳಜಿಯನ್ನು ಜಯ ಕರ್ನಾಟಕ ಸಂಘಟನೆ ಅಭಿನಂದಿಸುತ್ತದೆ. ಮುಂದೆಯೂ ಸಾರ್ವಜನಿಕರ ಹಿತಾಸಕ್ತಿಗೆ ಧಕ್ಕೆಯಾಗುವ ಯಾವುದೇ ವಿಷಯದಲ್ಲಿಯೂ ಸಂಘಟನೆ ಜನರ ಪರವಾಗಿ ನಿರಂತರ ಹೋರಾಟ ನಡೆಸಲಿದೆ” ಎಂದು ತಿಳಿಸಿದ್ದಾರೆ.