ಅಂಬೇಡ್ಕರ್ ಜಯಂತಿಗೆ ಗೈರುಹಾಜರಿ: ಶಾಸಕ ಗೋಪಾಲಕೃಷ್ಣ ಬೇಳೂರು ವಿರುದ್ಧ ತೀವ್ರ ಟೀಕೆ

Posted by

ದೇಶದಾದ್ಯಂತ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದ ಸಂದರ್ಭದಲ್ಲಿ, ಸಚಿವ ಸ್ಥಾನಕ್ಕಾಗಿ ದೆಹಲಿಯಲ್ಲಿ ತಂಗಿದ್ದ ಶಾಸಕ ಗೋಪಾಲಕೃಷ್ಣ ಬೇಳೂರು ತಮ್ಮ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮಗಳಿಗೆ ಹಾಜರಾಗದೆ ನಿರ್ಲಕ್ಷ ತೋರಿದ್ದಾರೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ಹೊನಗೋಡು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ಬಾರಿ ಶಾಸಕರಾಗಿರುವ ಗೋಪಾಲಕೃಷ್ಣ ಬೇಳೂರು ಅವರಿಗೆ ಅಂಬೇಡ್ಕರ್ ಅವರ ಚಿಂತನೆಗಳು ಮತ್ತು ಸಂವಿಧಾನದ ಮಹತ್ವದ ಬಗ್ಗೆ ಸೂಕ್ತ ಅರಿವು ಇಲ್ಲದಂತಾಗಿದೆ ಎಂದು ಟೀಕಿಸಿದರು. ಇತರ ಕೆಲಸಗಳಿಗಾಗಿ ತ್ವರಿತವಾಗಿ ಪ್ರಯಾಣ ಮಾಡುವವರು, ಅಂಬೇಡ್ಕರ್ ಜಯಂತಿಯಂತಹ ಮಹತ್ವದ ದಿನವನ್ನು ಕಡೆಗಣಿಸಿರುವುದು ದುಃಖಕರ ಸಂಗತಿ ಎಂದು ಹೇಳಿದರು.

ತಾಲೂಕಿನ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಸಾಮಾನ್ಯ ನಾಗರಿಕರು ಯಾವುದೇ ಸರ್ಕಾರಿ ಕಚೇರಿಗೆ ಹೋದರೂ ಲಂಚವಿಲ್ಲದೆ ಕೆಲಸ ಮಾಡಿಸಿಕೊಳ್ಳುವುದು ಕಷ್ಟವಾಗಿದೆ ಎಂದು ಆರೋಪಿಸಿದರು. ಶಾಸಕರು ಹಣ ಸಂಗ್ರಹ, ಆಸ್ತಿ ಹೆಚ್ಚಳ ಮತ್ತು ವರ್ಗಾವಣೆ ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದಾರೆ ಎಂಬ ಗಂಭೀರ ಆರೋಪವನ್ನೂ ಅವರು ಹೊರಹಾಕಿದರು.ಹಿಂದೆ “ನನ್ನ ಬಳಿ ಹಣವಿಲ್ಲ” ಎಂದು ಹೇಳಿ ಜನರ ಸಹಾನುಭೂತಿ ಪಡೆದು ಮತಗಳನ್ನು ಗೆದ್ದವರು, ಈಗ ಭ್ರಷ್ಟಾಚಾರದ ಮೂಲಕ ಆಡಳಿತ ನಡೆಸುತ್ತಿರುವುದು ಅಸ್ವೀಕಾರ್ಯ ಎಂದು ಹೇಳಿದರು.

ಜನರ ಹಿತಾಸಕ್ತಿಯನ್ನು ಕಡೆಗಣಿಸುವಂತಹ ನೀತಿಗಳನ್ನು ತಕ್ಷಣ ಬದಲಿಸದಿದ್ದರೆ, ಮುಂದಿನ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.ಕ್ಷೇತ್ರದ ಸ್ಥಿತಿ ಹದಗೆಟ್ಟಿರುವುದನ್ನು ರೂಪಕವಾಗಿ ವಿವರಿಸಿದ ಅವರು, “ಎತ್ತಿಗೆ ಮೂಗು ದಾಣ ಹಾಕಿದರೆ ಮಾತ್ರ ಅದು ನಿಯಂತ್ರಣದಲ್ಲಿರುತ್ತದೆ; ಈಗ ಅದು ಕೈ ತಪ್ಪಿದಂತಾಗಿದೆ. 2028ರ ಚುನಾವಣೆಯಲ್ಲಿ ಜನತೆ ತೀರ್ಮಾನ ಮಾಡುತ್ತಾರೆ” ಎಂದು ಹೇಳಿದರು.

ತಾಲೂಕಿನಲ್ಲಿ ಮದ್ಯಪಾನದ ವ್ಯಾಪಾರ ಹೆಚ್ಚಾಗಿ, ಹಳ್ಳಿಗಳಲ್ಲೂ ಅನಧಿಕೃತ ಮದ್ಯ ಮಾರಾಟ ನಡೆಯುತ್ತಿದೆ. ಇದಕ್ಕೆ ಪ್ರೋತ್ಸಾಹ ನೀಡುವವರು ಶಾಸಕರಿಗೆ ಸಹಾಯ ಮಾಡುತ್ತಿದ್ದಾರೆ ಎಂಬ ಆರೋಪವನ್ನೂ ಅವರು ಮಾಡಿದರು.ಮ್ಯಾಮ್‌ಕೋಸ್ ನಿರ್ದೇಶಕ ಬರಮಪ್ಪ ಕೂಡ ಮಾತನಾಡಿ, ಅಂಬೇಡ್ಕರ್ ಅವರನ್ನು ಕಡೆಗಣಿಸುವ ಧೋರಣೆ ಹಿಂದಿನಿಂದಲೂ ಕಂಡುಬಂದಿದ್ದು, ಅದನ್ನೇ ಶಾಸಕ ಮುಂದುವರಿಸುತ್ತಿದ್ದಾರೆ ಎಂದು ಹೇಳಿದರು.

ಅಂಬೇಡ್ಕರ್ ಜಯಂತಿಗೆ ಗೈರುಹಾಜರಾಗಿರುವುದು ಸಂವಿಧಾನ ಶಿಲ್ಪಿಗೆ ಅವಮಾನವಾಗಿದ್ದು, ಶಾಸಕರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಆನಂದಪುರ ಶಕ್ತಿ ಕೇಂದ್ರ ಅಧ್ಯಕ್ಷ ಶಾಂತಪ್ಪ ಗೌಡ್ರು, ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ರೇವಪ್ಪ ಹೊಸಕೊಪ್ಪ, ರವಿಕುಮಾರ್ ಸುಬ್ರಮಣ್ಯ ಹಾಗೂ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *