ಹೆತ್ತ ಕರುಳಿನ ಕಣ್ಣೆದುರೇ ಹರಿದ ಲಾರಿ ಕೊನೆಗೂ ಕಾಪಾಡಲಿಲ್ಲ ಆಂಜನೇಯ!!

Posted by

ನೆಲಮಂಗಲ, ಮಾ.21: ಯುಗಾದಿ ಹಬ್ಬದ ಸಂಭ್ರಮದಲ್ಲಿ ದೇವಸ್ಥಾನಕ್ಕೆ ತೆರಳುತ್ತಿದ್ದ ಕುಟುಂಬಕ್ಕೆ ವಿಧಿಯ ಕ್ರೂರ ಆಟ ಎದುರಾಗಿದೆ. ಕ್ಯಾಂಟ್ರೋ ಲಾರಿ ಹರಿದು ನಾಲ್ಕು ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹನುಮಂತೇಗೌಡನ ಪಾಳ್ಯದಲ್ಲಿ ಶನಿವಾರ ನಡೆದಿದೆ.
ಮೃತ ಬಾಲಕಿಯನ್ನು ನಿಶಿಕಾ (4) ಎಂದು ಗುರುತಿಸಲಾಗಿದೆ. ಇವಳು ರಾಜೇಂದ್ರ ಮತ್ತು ಲಾವಣ್ಯ ದಂಪತಿಯ ಮೊದಲ ಮಗಳಾಗಿದ್ದಾಳೆ.
ತಾಯಿ ಲಾವಣ್ಯ ತಮ್ಮ ಎರಡನೇ ಮಗುವನ್ನು ಕಂಕಳಲ್ಲಿ ಹೊತ್ತುಕೊಂಡು, ನಿಶಿಕಾಳ ಕೈ ಹಿಡಿದು ಗೊಲ್ಲಹಳ್ಳಿಯ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಿರಿದಾದ ರಸ್ತೆಯಲ್ಲಿ ಅತೀವೇಗವಾಗಿ ಬಂದ ಕ್ಯಾಂಟ್ರೋ ಲಾರಿ ಚಾಲಕನ ನಿರ್ಲಕ್ಷ್ಯದಿಂದ ನಿಶಿಕಾಳ ಮೇಲೆ ಹರಿದಿದೆ.
ಅಪಘಾತದ ಹೊತ್ತಿಗೆ ಲಾರಿ ತಾಯಿ ಮತ್ತು ಇನ್ನೊಂದು ಮಗುವಿನ ಮೇಲೆಯೂ ಬಂದಿದ್ದರೂ, ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ನಿಶಿಕಾ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾಳೆ.
ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಲಾರಿಯ ಗಾಜುಗಳನ್ನು ಒಡೆದು ಹಾಕಿ, ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಹಾಗೂ ಚಾಲಕನನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ.
ಈ ದಾರುಣ ಘಟನೆ ಯುಗಾದಿ ಹಬ್ಬದ ಸಂಭ್ರಮಕ್ಕೆ ಕತ್ತಲೆ ತಂದಿದೆ.

ವರದಿ : ಗಣೇಶ್ ರಿಪ್ಪನ್ ಪೇಟೆ

Leave a Reply

Your email address will not be published. Required fields are marked *