ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ವರ್ತೂರು ಪ್ರದೇಶದಲ್ಲಿ ಭಯಾನಕ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮದುವೆಯಾಗಿರುವ ವಿಚಾರವನ್ನು ಮುಚ್ಚಿಟ್ಟು ಲಿವ್-ಇನ್ ಸಂಬಂಧದಲ್ಲಿದ್ದ ಯುವತಿಯನ್ನು ಆಕೆಯ ಗೆಳೆಯನೇ ಕತ್ತು ಬಿಗಿದು ಕೊಲೆ ಮಾಡಿದ ಘಟನೆ ನಡೆದಿದೆ. ಕೊಡಗು ಜಿಲ್ಲೆಯ ಮೂಲದ ರಂಜಿತಾ (23) ಈ ಘಟನೆದಲ್ಲಿ ಮೃತಪಟ್ಟ ಯುವತಿ.
ಪೊಲೀಸರು ನೀಡಿದ ಮಾಹಿತಿಯಂತೆ, ಕೊಡಗಿನಿಂದ ಉದ್ಯೋಗದ ಹುಡುಕಾಟದಲ್ಲಿ ಬೆಂಗಳೂರಿಗೆ ಬಂದಿದ್ದ ರಂಜಿತಾಳಿಗೆ ಅಯ್ಯಪ್ಪ ಎಂಬಾತ ಪರಿಚಯವಾಗಿದ್ದು, ನಂತರ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು. ಕೆಲಕಾಲದಿಂದ ಇಬ್ಬರೂ ವರ್ತೂರಿನ ಬಾಡಿಗೆ ಮನೆಯೊಂದರಲ್ಲಿ ಲಿವ್-ಇನ್ ಸಂಬಂಧದಲ್ಲಿ ವಾಸವಾಗಿದ್ದರು. ಅಯ್ಯಪ್ಪ ತನ್ನನ್ನು ಮದುವೆಯಾಗುತ್ತಾನೆ ಎಂದು ನಂಬಿದ್ದ ರಂಜಿತಾಳಿಗೆ, ಆತ ಈಗಾಗಲೇ ವಿವಾಹಿತನಾಗಿರುವ ವಿಚಾರ ಇತ್ತೀಚೆಗೆ ತಿಳಿದುಬಂದಿತ್ತು.
ಈ ವಿಷಯದ ಬಗ್ಗೆ ಇಬ್ಬರ ನಡುವೆ ಮನೆಯಲ್ಲಿ ಜಗಳ ನಡೆದಿದ್ದು, ಮಾತಿನ ಚಕಮಕಿ ತಾರಕಕ್ಕೇರಿದೆ. ಜಗಳದ ವೇಳೆ ಆಕ್ರೋಶಗೊಂಡ ಅಯ್ಯಪ್ಪ, ಮನೆಯಲ್ಲಿದ್ದ ಎಲೆಕ್ಟ್ರಿಕಲ್ ವೈಯರ್‌ನಿಂದ ರಂಜಿತಾಳ ಕತ್ತನ್ನು ಬಿಗಿದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಯುವತಿ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸಿದರೂ ಆರೋಪಿ ಕ್ರೂರವಾಗಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ಘಟನೆಯ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಮಾಹಿತಿ ತಿಳಿದ ತಕ್ಷಣ ವರ್ತೂರು ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ನಂತರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಈ ಸಂಬಂಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ವರದಿ : ಗಣೇಶ್ ರಿಪ್ಪನ್ ಪೇಟೆ

By Anjan Kerehalli

ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ನಮ್ಮ ಧ್ವನಿ, ನಿಮ್ಮ ಹಕ್ಕು ಮಲ್ಲಾಡ್ ಸುದ್ದಿ ಎಕ್ಸ್ಪ್ರೆಸ್ ದು ಮಲೆನಾಡ ಜನರ ಧ್ವನಿ “ನಮ್ಮ ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ಜನರೊಂದಿಗೆ, ಜನರಿಗಾಗಿ.”

Leave a Reply

Your email address will not be published. Required fields are marked *