
ಹರಿದ್ರಾವತಿ ಮೀಸಲು ಅರಣ್ಯದಲ್ಲಿ ಶ್ರೀಗಂಧ ಮರ ಕಡಿತ – 28 ಕೆಜಿ ಶ್ರೀಗಂಧ ವಶ, ಮೂವರು ಆರೋಪಿಗಳ ಬಂಧನ
ಹೊಸನಗರ: ತಾಲೂಕಿನ ಹರಿದ್ರಾವತಿ ಗ್ರಾಮದ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಶ್ರೀಗಂಧ ಮರವನ್ನು ಕಡಿದು ಸಾಗಾಣಿಕೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 28.624 ಕೆ.ಜಿ. ಶ್ರೀಗಂಧ ಹಾಗೂ ಸಾಗಾಣಿಕೆಗಾಗಿ ಬಳಸಲಾಗಿದ್ದ ದ್ವಿಚಕ್ರ ವಾಹನವನ್ನು ಇಲಾಖೆಯವರು ವಶಕ್ಕೆ ಪಡೆದಿದ್ದಾರೆ.
ಅರಣ್ಯ ಇಲಾಖೆಯಿಂದ ಲಭಿಸಿದ ಮಾಹಿತಿಯ ಪ್ರಕಾರ, ದಿನಾಂಕ 07.03.2026 ರಂದು ಹೊಸನಗರ ವಲಯದ ವ್ಯಾಪ್ತಿಯ ಹರಿದ್ರಾವತಿ ಗ್ರಾಮದ ಸರ್ವೆ ಸಂಖ್ಯೆ 81 ರ ಹರಿದ್ರಾವತಿ ಮೀಸಲು ಅರಣ್ಯ ಪ್ರದೇಶದಲ್ಲಿ ಕೆಲವರು ಅಕ್ರಮವಾಗಿ ಶ್ರೀಗಂಧದ ಮರವನ್ನು ಕಡಿದು ದ್ವಿಚಕ್ರ ವಾಹನದ ಮೂಲಕ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಮಾಹಿತಿ ದೊರಕಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಅರಣ್ಯ ಸಂಚಾರಿದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.
ಕಾರ್ಯಾಚರಣೆ ವೇಳೆ ಆರೋಪಿಗಳಾದ ಶ್ರೀನಾಥ ಬಿನ್ ಚನ್ನಪ್ಪ (27), ಹರಿದ್ರಾವತಿ ಗ್ರಾಮದ ನಿವಾಸಿ, ಕೀರ್ತನ ಬಿನ್ ಕುಮಾರ (25), ಕುಕ್ಕೋಡು ಅಗಸರಮನೆ, ಕಾರಣಗಿರಿ ಗ್ರಾಮ ಮೂಲದವರಾಗಿದ್ದು ಪ್ರಸ್ತುತ ಹರಿದ್ರಾವತಿ ಗ್ರಾಮದಲ್ಲಿ ವಾಸಿಸುತ್ತಿರುವವರು, ಹಾಗೂ ನವೀನ ಬಿನ್ ಉಮೇಶ (23), ಹರಿದ್ರಾವತಿ ಗ್ರಾಮದ ನಿವಾಸಿ ಇವರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳಿಂದ ಅಂದಾಜು 28.624 ಕೆ.ಜಿ. ಶ್ರೀಗಂಧವನ್ನು ವಶಕ್ಕೆ ಪಡೆಯಲಾಗಿದ್ದು, ಸಾಗಾಣಿಕೆಗಾಗಿ ಬಳಸಲಾಗಿದ್ದ ಹಿರೋ ಸ್ಪೆಂಡರ್ ಪ್ಲಸ್ ಕಂಪನಿಯ ದ್ವಿಚಕ್ರ ವಾಹನ (ನೊಂದಣಿ ಸಂಖ್ಯೆ: KA 15 EE 2328) ಅನ್ನು ಸಹ ಇಲಾಖೆಯವರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ತಿಳಿದುಬಂದಿದೆ. ಪ್ರಕರಣದ ಕುರಿತು ಅರಣ್ಯ ಇಲಾಖೆ ಮುಂದಿನ ತನಿಖೆಯನ್ನು ಮುಂದುವರೆಸುತ್ತಿದೆ.
ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಅರಣ್ಯ ಸಂಚಾರಿದಳದ ಪಿಎಸ್‌ಐ ಶ್ರೀ ವಿನಾಯಕ ಕೆ ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಜೊತೆಗೆ ಹೊಸನಗರ ವಲಯದ ವಲಯ ಅರಣ್ಯಾಧಿಕಾರಿ ಶ್ರೀ ಅನಿಲ್ ಕುಮಾರ್ ಎಸ್., ಉಪ ವಲಯ ಅರಣ್ಯಾಧಿಕಾರಿ ಶ್ರೀ ನವೀನ್ ಕುಮಾರ್ ಸಿ.ಎಂ., ಗಸ್ತು ಅರಣ್ಯ ಪಾಲಕರಾದ ಶ್ರೀ ಪುಟ್ಟಸ್ವಾಮಿ ಕೆ.ವಿ., ಶ್ರೀ ಪ್ರಶಾಂತ ಜಿ., ಶ್ರೀ ಗಿರೀಶ್ ಎಸ್., ಶ್ರೀ ನವೀನ ಹಾಗೂ ಶ್ರೀ ರಮೇಶ್ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಅರಣ್ಯ ಸಂಪತ್ತಿನ ಅಕ್ರಮ ಕಡಿತ ಹಾಗೂ ಸಾಗಾಣಿಕೆಗೆ ವಿರುದ್ಧವಾಗಿ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ರೀತಿಯ ಅಕ್ರಮ ಚಟುವಟಿಕೆಗಳ ವಿರುದ್ಧ ಸಾರ್ವಜನಿಕರು ಸಹ ಜಾಗೃತರಾಗಿದ್ದು, ಯಾವುದೇ ಅನುಮಾನಾಸ್ಪದ ಮಾಹಿತಿ ಕಂಡುಬಂದಲ್ಲಿ ತಕ್ಷಣ ಇಲಾಖೆಗೆ ತಿಳಿಸಲು ಅಧಿಕಾರಿಗಳು ಮನವಿ ಮಾಡಿದ್ದಾರೆ.
ವರದಿ:ಅಂಜನ್ ಕೆರೆಹಳ್ಳಿ