
ವೈಭವೋಪೇತ ಹಿಂದೂ ದಿಗ್ವಿಜಯ ಯಾತ್ರೆ: ಸಹಕಾರ ನೀಡಿದ ಸಮಸ್ತ ಹಿಂದೂ ಸಮಾಜಕ್ಕೆ ಕೃತಜ್ಞತೆ
ಹೊಸನಗರ: ಅಖಿಲ ಭಾರತ ಹಿಂದೂ ಮಹಾಸಭಾ ಹೊಸನಗರ ಘಟಕದ ವತಿಯಿಂದ ಆಯೋಜಿಸಲಾಗಿದ್ದ 2026ನೇ ಸಾಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಹಾಗೂ ವೈಭವೋಪೇತ ಹಿಂದೂ ದಿಗ್ವಿಜಯ ಯಾತ್ರೆಯು ಸಮಸ್ತ ಹಿಂದೂ ಸಮಾಜದ ಸಹಕಾರದೊಂದಿಗೆ ಯಶಸ್ವಿಯಾಗಿ ನೆರವೇರಿದ್ದು, ಉತ್ಸವದ ಯಶಸ್ಸಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುವುದಾಗಿ ಕಾರ್ಯಸಂಚಾಲಕ ಅನೂಪ್ ಅರವಿಂದ್ ಹೇಳಿದರು.
ಸೆಪ್ಟೆಂಬರ್ 30ರಂದು ಬುಧವಾರ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅವಲೋಕನ ಬೈಠಕ್ ಅನ್ನುದ್ದೇಶಿಸಿ ಮಾತನಾಡಿದ ಅವರು, ಗಣೇಶೋತ್ಸವದ ಆರಂಭದಿಂದ ಅಂತ್ಯದವರೆಗೆ ನಡೆದ ಪ್ರತಿಯೊಂದು ಕಾರ್ಯಕ್ರಮವೂ ಸಾರ್ವಜನಿಕರ ಸಹಕಾರ ಮತ್ತು ಕಾರ್ಯಕರ್ತರ ಪರಿಶ್ರಮದಿಂದ ಯಶಸ್ವಿಯಾಗಿವೆ ಎಂದು ಹೇಳಿದರು.
ವಿಶೇಷವಾಗಿ ಪ್ರತಿಷ್ಠಾಪನಾ ಯಾತ್ರೆಯಿಂದ ಹಿಡಿದು ಹಿಂದೂ ದಿಗ್ವಿಜಯ ಯಾತ್ರೆಯವರೆಗೆ ನಡೆದ ಕಾರ್ಯಕ್ರಮಗಳು ಉತ್ಸವಕ್ಕೆ ವಿಶೇಷ ಮೆರುಗು ನೀಡಿದವು. ವೀರ ಸಾವರ್ಕರ್ ಮಂಟಪದ ಪ್ರಧಾನ ವೇದಿಕೆ ಹಾಗೂ ವೀರಸನ್ಯಾಸಿ ಸ್ವಾಮಿ ವಿವೇಕಾನಂದ ವೇದಿಕೆಯಲ್ಲಿ ನಡೆದ ಭಜನೆ, ಗಮಕ, ಭರತನಾಟ್ಯ, ಚಿಣ್ಣರ ನೃತ್ಯ, ಯಕ್ಷಗಾನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರ ಗಮನ ಸೆಳೆದವು. ಇವುಗಳ ಮೂಲಕ ಸ್ಥಳೀಯ ಕಲೆ, ಸಂಸ್ಕೃತಿ ಮತ್ತು ಪರಂಪರೆಗೆ ಉತ್ತಮ ವೇದಿಕೆ ದೊರೆತಂತಾಗಿದೆ ಎಂದು ಅನೂಪ್ ಅರವಿಂದ್ ತಿಳಿಸಿದರು.
ಹಿಂದೂ ದಿಗ್ವಿಜಯ ಯಾತ್ರೆಯಲ್ಲಿ ಭಾಗವಹಿಸಿದ ಯುವಶಕ್ತಿ, ಮಾತೃಶಕ್ತಿ, ಸಜ್ಜನಶಕ್ತಿ, ಸುಪ್ತಶಕ್ತಿ ಹಾಗೂ ಉತ್ಸುಕಶಕ್ತಿ ಸೇರಿದಂತೆ ವಿವಿಧ ವರ್ಗಗಳ ಜನರ ಉತ್ಸಾಹಭರಿತ ಪಾಲ್ಗೊಳ್ಳುವಿಕೆಯನ್ನು ಅವರು ವಿಶೇಷವಾಗಿ ಸ್ಮರಿಸಿದರು. ಯಾತ್ರೆಗೆ ಮೆರುಗು ನೀಡಿದ ವಿವಿಧ ಕಲಾತಂಡಗಳು ಹಾಗೂ ಕಾರ್ಯಕ್ರಮದ ಯಶಸ್ಸಿಗಾಗಿ ಹಗಲಿರುಳು ಶ್ರಮಿಸಿದ ಕಾರ್ಯಕರ್ತರ ಸೇವೆಯನ್ನು ಇದೇ ಸಂದರ್ಭದಲ್ಲಿ ಅವರು ಅಭಿನಂದಿಸಿದರು.
ಗಣೇಶೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಿಗೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಇಂತಹ ಯಶಸ್ವಿ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಹಾಗೂ ವೈಭವದಿಂದ ಉತ್ಸವಗಳನ್ನು ಆಯೋಜಿಸಲು ಪ್ರೇರಣೆ ನೀಡಿವೆ ಎಂದು ಅವರು ಹೇಳಿದರು.
ಪ್ರತಿಯೊಬ್ಬ ದಾನಿ, ಮಹಾದಾನಿಗೂ ಕೃತಜ್ಞತೆಗೌರವ
ಸಂಚಾಲಕರಾದ ಕೆ.ಎಸ್. ವಿನಾಯಕ ಶ್ರೇಷ್ಠಿ ಮಾತನಾಡಿ, ಸಾರ್ವಜನಿಕ ಶ್ರೀ ಗಣೇಶೋತ್ಸವದ ಯಶಸ್ಸಿನ ಹಿಂದೆ ನಿಂತಿರುವ ಪ್ರತಿಯೊಬ್ಬ ದಾನಿ ಹಾಗೂ ಮಹಾದಾನಿಗಳ ಸಹಕಾರವನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.
ಉತ್ಸವದ ಸಂದರ್ಭದಲ್ಲಿ ಅಗತ್ಯ ಸಹಕಾರ ನೀಡಿದ ರಕ್ಷಣಾ ಇಲಾಖೆ, ವಿದ್ಯುತ್ ಇಲಾಖೆ, ಕಂದಾಯ ಇಲಾಖೆ, ಪಟ್ಟಣ ಪಂಚಾಯಿತಿ, ಪತ್ರಿಕಾ ಪ್ರತಿನಿಧಿಗಳು, ವಿವಿಧ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳಿಗಳು, ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಕಾರ್ಯಕರ್ತರಿಗೆ ಅವರು ಧನ್ಯವಾದ ಅರ್ಪಿಸಿದರು.
ಇದರ ಜೊತೆಗೆ ಕಾರ್ಯಕ್ರಮದ ವಿವಿಧ ಹಂತಗಳಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಸಮಸ್ತ ಮಹಾಜನತೆ, ಕಲಾತಂಡಗಳು, ಸ್ವಯಂಸೇವಕರು ಹಾಗೂ ಹಿತೈಷಿಗಳ ಸಹಕಾರವೇ ಉತ್ಸವದ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ ಎಂದು ಅವರು ಹೇಳಿದರು.
ಸಾರ್ವಜನಿಕ ಶ್ರೀ ಗಣೇಶೋತ್ಸವವು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ, ಸಮಾಜದ ವಿವಿಧ ವರ್ಗಗಳನ್ನು ಒಂದೆಡೆ ಸೇರಿಸುವ, ಯುವಜನತೆಯಲ್ಲಿ ಸಂಘಟನಾ ಮನೋಭಾವ ಬೆಳೆಸುವ ಹಾಗೂ ಸ್ಥಳೀಯ ಕಲೆ-ಸಂಸ್ಕೃತಿಗೆ ಉತ್ತೇಜನ ನೀಡುವ ವೇದಿಕೆಯಾಗಿ ಮೂಡಿಬಂದಿರುವುದು ವಿಶೇಷ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು
ಪದಾಧಿಕಾರಿಗಳು, ಕಾರ್ಯಕರ್ತರ ಉಪಸ್ಥಿತಿ
ಅವಲೋಕನ ಬೈಠಕ್‌ನಲ್ಲಿ ಪ್ರಧಾನ ಸಂಚಾಲಕ ಗಣೇಶ್ ಮಧುಕರ್, ಪ್ರಧಾನ ಕೋಶಾಧಿಕಾರಿ ನಾಗರಾಜ್, ಸಾಂಸ್ಕೃತಿಕ ಸಂಚಾಲಕ ಮಂಜುನಾಥ್ ಪೂಜಾರಿ, ಸುರೇಂದ್ರ ಕೋಟ್ಯಾನ್, ನಂದಿ ಸಂತೋಷ್, ಸುಧೀಂದ್ರ ಪಂಡಿತ್, ಕೆ. ವಿನಯ್ ಕುಮಾರ್, ಶಿವಕುಮಾರ್, ಕಾವ್ಯ ಕಾರಣಗಿರಿ, ಮಂಜು, ಸಂಜೀವ್, ಕಾರ್ತಿಕ್, ನಿಶ್ಚಿತ್ ಸೇರಿದಂತೆ ಸಮಿತಿಯ ವಿವಿಧ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
